ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿಗಾಗಿ ಕಡಿಮೆ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟವನ್ನು ಒಗ್ಗಟ್ಟಾಗಿರಿಸುವ ಹಾಗೂ ಬಿಜೆಪಿಯನ್ನು ಪರಾಭವಗೊಳಿಸುವ ಕಾರ್ಯತಂತ್ರದ ಭಾಗವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ಕಾಂಗ್ರೆಸ್ ಕೈಗೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, “ಇದು ಪಕ್ಷದ ಆತ್ಮವಿಶ್ವಾಸದ ಕೊರತೆಯನ್ನು ಬಿಂಬಿಸುವುದಿಲ್ಲ. ಬದಲಿಗೆ, ದೇಶದ ವಿವಿಧ ಭಾಗಗಳಲ್ಲಿ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿರುವ ಇತರ ಪಕ್ಷಗಳಿಗೆ ಅವಕಾಶ ಒದಗಿಸಿ, ವಿರೋಧ ಪಕ್ಷಗಳ ಮೈತ್ರಿಕೂಟದ ಗೆಲುವನ್ನು ಖಾತರಿಪಡಿಸಲು ಈ ರಾಜಿ ಮಾಡಿಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷದ ಆಸ್ತಿ ಮತ್ತು ತಾರಾ ಪ್ರಚಾರಕಿ ಎಂದು ಬಣ್ಣಿಸಿರುವ ಖರ್ಗೆ, ಚುನಾವಣೆಯಲ್ಲಿ ಸ್ಪರ್ಧಿಸದಿರುವ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಒಂದು ವೇಳೆ ರಾಹುಲ್ ಗಾಂಧಿ ರಾಯ್ ಬರೇಲಿ ಹಾಗೂ ವಯನಾಡ್ ಕ್ಷೇತ್ರಗಳೆರಡರಲ್ಲೂ ಗೆಲುವು ಸಾಧಿಸಿದರೆ, ಅವರು ಯಾವ ಕ್ಷೇತ್ರವನ್ನು ತೊರೆಯಬೇಕು ಎಂಬ ಪ್ರಶ್ನೆಗೆ, ಅದು ಅವರ ವೈಯಕ್ತಿಕ ಆಯ್ಕೆ ಎಂದು ಖರ್ಗೆ ಉತ್ತರಿಸಿದ್ದಾರೆ.
ಸಮಾನ ಮನಸ್ಥಿತಿಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಪ್ರತಿ ರಾಜ್ಯದಲ್ಲೂ ಮೈತ್ರಿ ಏರ್ಪಡಿಸಲು ಕಾಂಗ್ರೆಸ್ ಪಕ್ಷವು ಸಮಿತಿಯೊಂದನ್ನು ರಚಿಸಿತ್ತು ಎಂದೂ ಅವರು ಹೇಳಿದ್ದಾರೆ.
“ಈ ಕಾರ್ಯತಂತ್ರವನ್ನು ಪಕ್ಷದ ಹೈಕಮಾಂಡ್ ಅನುಮೋದಿಸಿತು. ನಾವು ಪ್ರತಿ ರಾಜ್ಯದಲ್ಲೂ ಸಮಾಲೋಚನೆಯನ್ನು ಹಮ್ಮಿಕೊಂಡೆವು” ಎಂದು ಅವರು ತಿಳಿಸಿದ್ದಾರೆ.
ಭಾರತದ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಅತ್ಯಂತ ಕಡಿಮೆ ಸ್ಥಾನಗಳಲ್ಲಿ (328 ಸ್ಥಾನಗಳು) ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು, ಉಳಿದ 200ಕ್ಕೂ ಹೆಚ್ಚು ಸ್ಥಾನಗಳನ್ನು ಇಂಡಿಯಾ ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.
ಮೈತ್ರಿಕೂಟದ ಹಲವಾರು ಪಕ್ಷಗಳು ಕೇರಳ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಪರಸ್ಪರ ಎದುರುಬದುರು ಸ್ಪರ್ಧಿಸುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಖರ್ಗೆ, “ಕೇಂದ್ರ ಸರಕಾರದ ವಿರುದ್ಧದ ವಿರೋಧ ಪಕ್ಷಗಳ ಹೋರಾಟದಲ್ಲಿ ಯಾವುದೇ ಬಿರುಕಿಲ್ಲ. ನಾವು ಇಬ್ಬರೂ ಪ್ರಬಲವಾಗಿರುವ ಕೆಲವು ರಾಜ್ಯಗಳಲ್ಲಿ ಪರಸ್ಪರ ಎದುರುಬದುರಾಗಿ ಸ್ಪರ್ಧಿಸುತ್ತಿದ್ದೇವೆ. ಇಲ್ಲದಿದ್ದರೆ, ಅದರಿಂದ ಬಿಜೆಪಿಗೆ ಲಾಭವಾಗಲಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರತಿ ರಾಜ್ಯದಲ್ಲೂ ಭಿನ್ನ ಮೈತ್ರಿ ಇದ್ದರೂ, ನಾವೆಲ್ಲರೂ ಬಿಜೆಪಿ ಹಾಗೂ ಮೋದಿಯ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ಇಂಡಿಯಾ ಮೈತ್ರಿಕೂಟದ ಪಕ್ಷಗಳು ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ತುಂಬಾ ಆಲೋಚಿಸಿ ನಿರ್ಧಾರ ಕೈಗೊಂಡಿವೆ” ಎಂದೂ ಅವರು ತಿಳಿಸಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.