ಮುಂಬೈ ಮಹಾನಗರದ 36 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ದಕ್ಕಿದ್ದು 'ಗೆಲ್ಲಲಾಗದ' 11 ಸ್ಥಾನಗಳು !
ಮುಂಬೈ: ಮಹಾನಗರದ 36 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 11 ಸ್ಥಾನಗಳಲ್ಲಷ್ಟೇ ಸ್ಪರ್ಧಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 30 ಸ್ಥಾನಗಳಲ್ಲಿ ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಇತ್ತೀಚಿನ ವರ್ಷಗಳಲ್ಲೇ ಕನಿಷ್ಠ ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಶಿವಸೇನೆ (ಯುಬಿಟಿ) ಜತೆಗೆ ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ವರ್ಷಾ ಗಾಯಕ್ವಾಡ್ ಮತ್ತು ಶಾಸಕ ಅಸ್ಲಂ ಶೇಕ್ ನೇತೃತ್ವದಲ್ಲಿ ಹಲವು ಸುತ್ತುಗಳ ಮಾತುಕತೆ ನಡೆದ ಹೊರತಾಗಿಯೂ ಎಂವಿಎ ಸೂತ್ರದ ಅನ್ವಯ ಕೇವಲ ಎರಡಂಕಿ ಸ್ಥಾನಗಳನ್ನು ತಲುಪಲು ಮಾತ್ರ ಸಾಧ್ಯವಾಗಿದೆ. ಇದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆ ಎನಿಸಿದ ಸ್ಥಾನಗಳಾಗಿದ್ದು, ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಕಷ್ಟ ಹಾಗೂ ಅಸಾಧ್ಯ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.
ಕಾಂಗ್ರೆಸ್ ಸ್ಪರ್ಧಿಸುತ್ತಿರುವ 11 ಕ್ಷೇತ್ರಗಳ ಪೈಕಿ ನಾಲ್ವರು ಹಾಲಿ ಕಾಂಗ್ರೆಸ್ ಶಾಸಕರ ಸ್ಥಾನಗಳು ಸೇರಿವೆ. ಬಾಂದ್ರಾ ಪೂರ್ವ ಕ್ಷೇತ್ರದ ಬದಲು ಸೇನಾ (ಯುಬಿಟಿ) ಜತೆ ಚಂಡಿವಿಲಿ ಕ್ಷೇತ್ರವನ್ನು ವಿನಿಮಯ ಮಾಡಿಕೊಂಡಿದೆ. ಕಾಂಗ್ರೆಸ್ ಸ್ಪರ್ಧಿಸಲು ತೀವ್ರ ಇಂಗಿತ ಹೊಂದಿದ್ದ ಬೈಕುಲ್ಲಾ ಮತ್ತು ವರ್ಸೋವಾ ಕ್ಷೇತ್ರಗಳನ್ನು ಕೂಡ ಬಿಟ್ಟುಕೊಟ್ಟಿದೆ.
"ಹಲವು ದಶಕಗಳಲ್ಲಿ ಇದು ಕಾಂಗ್ರೆಸ್ ನ ಕನಿಷ್ಠ ಸ್ಥಾನಗಳಾಗಿವೆ. ಕೇವಲ 11 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸುತ್ತಿರುವುದು ಶಿವಸೇನೆ (ಯುಬಿಟಿ) ಮತ್ತು ಎನ್ ಸಿಪಿ (ಎಸ್ಪಿ) ಜತೆಗಿನ ಸ್ಥಾನ ಹೊಂದಾಣಿಕೆ ಕೌಶಲದಲ್ಲಿ ವಿಫಲವಾಗಿರುವುದನ್ನು ಸೂಚಿಸುತ್ತದೆ. ಯಾವುದೇ ಹಾಲಿ ಶಾಸಕರನ್ನು ಹೊಂದಿರದ, ಮುಂಬೈನಿಂದ ಲೋಕಸಭೆಗೆ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ ಎನ್ ಸಿಪಿ ಕೂಡಾ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಸಮಾಜವಾದಿ ಪಕ್ಷ 2 ಸ್ಥಾನಗಳಲ್ಲಿ ಕಣಕ್ಕೆ ಇಳಿದಿದೆ. ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ನ್ಯಾಯಬದ್ಧ ಸ್ಥಾನಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದು ಮುಂಬೈನಲ್ಲಿ ಪಕ್ಷದ ಭವಿಷ್ಯಕ್ಕೆ ಮಾರಕವಾಗಲಿದೆ. ಮೊಟ್ಟಮೊದಲ ಬಾರಿಗೆ ಈಶಾನ್ಯ ಮುಂಬೈನ ಕ್ಷೇತ್ರಗಳ ಪೈಕಿ ಕೇವಲ ಒಂದು ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧಿಸುತ್ತಿದೆ" ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
ಮುಳುಂದ್ ಕ್ಷೇತ್ರದಲ್ಲಿ ಕೂಡಾ ಎನ್ ಸಿಪಿ (ಎಸ್ಪಿ)ಯ ಸಂಗೀತಾ ವಾಝ್ ಮತ್ತು ಕಾಂಗ್ರೆಸ್ ನ ರಾಕೇಶ್ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ವಾಪಾಸು ಪಡೆದರೆ, ಕಾಂಗ್ರೆಸ್ ಗೆ ಇಡೀ ಈಶಾನ್ಯ ಮುಂಬೈನಲ್ಲಿ ಯಾವುದೇ ಕ್ಷೇತ್ರ ಇಲ್ಲದಾಗುತ್ತದೆ.
"ನಾವು 14-15 ಸ್ಥಾನಗಳಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೆವು. ಹಲವು ಸುತ್ತುಗಳ ಮಾತುಕತೆಯ ಕೊನೆಗೆ ಕೇವಲ 11 ಸ್ಥಾನಗಳನ್ನು ಮಾತ್ರ ಪಡೆದೆವು. ಏಕೆಂದರೆ ಸೇನಾ (ಯುಬಿಟಿ) ಮೊದಲೇ ಅಭ್ಯರ್ಥಿಗಳನ್ನು ಘೋಷಿಸಿತ್ತು. ಬೈಕುಲಾ ಮತ್ತು ವರ್ಸೋವಾ ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸಿದ್ದೆವು. ಆದರೆ ಮೈತ್ರಿ ಧರ್ಮವನ್ನು ಪಾಲಿಸಿ ಎಂವಿಎ ಶಾಸಕರು ಗರಿಷ್ಠ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ಪ್ರಯತ್ನಿಸುತ್ತೇವೆ" ಎಂದು ಗಾಯಕ್ವಾಡ್ ಹೇಳಿದ್ದಾರೆ.