1995ರಲ್ಲಿ ರೇಖಾ ಗುಪ್ತ ಮತ್ತು ತಾನು ಒಟ್ಟಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಭಾವಚಿತ್ರ ಹಂಚಿಕೊಂಡ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ

PC : indiatoday.in
ಹೊಸದಿಲ್ಲಿ: ಪಕ್ಷ ರಾಜಕಾರಣವನ್ನು ಬದಿಗಿಟ್ಟಿರುವ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ, ದಿಲ್ಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತ ಹಾಗೂ ತಾನು 1995ರಲ್ಲಿ ಒಟ್ಟಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಭಾವಚಿತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
1995ರಲ್ಲಿ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷೆಯಾಗಿ NSUI ವತಿಯಿಂದ ತಾನು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಬಿವಿಪಿ ವತಿಯಿಂದ ರೇಖಾ ಗುಪ್ತ ಪ್ರಮಾಣ ವಚನ ಸ್ವೀಕರಿಸಿದ್ದ ಹಳೆಯ ಭಾವಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಲ್ಕಾ ಲಂಬಾ, “ಇದು 1995ರಲ್ಲಿ ನಾನು ಹಾಗೂ ರೇಖಾ ಗುಪ್ತ ಒಟ್ಟಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸ್ಮರಣೀಯ ಭಾವಚಿತ್ರ. ಆಗ ನಾನು NSUI ವತಿಯಿಂದ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿ ಗೆಲುವು ಸಾಧಿಸಿದ್ದೆ ಹಾಗೂ ಎಬಿವಿಪಿ ವತಿಯಿಂದ ರೇಖಾ ಗುಪ್ತ ಪ್ರಧಾನ ಕಾರ್ಯದರ್ಶಿಯಾಗಿ ಜಯ ಗಳಿಸಿದ್ದರು. ರೇಖಾ ಗುಪ್ತಗೆ ಅಭಿನಂದನೆಗಳು. ನಾಲ್ಕನೆ ಮಹಿಳಾ ಮುಖ್ಯಂಮಂತ್ರಿಯನ್ನು ಪಡೆದಿರುವ ದಿಲ್ಲಿಗೂ ಅಭಿನಂದನೆಗಳು. ಯಮುನಾ ತಾಯಿ ಸ್ವಚ್ಛವಾಗುತ್ತಾಳೆ ಹಾಗೂ ಪುತ್ರಿಯರು ಸುರಕ್ಷಿತವಾಗಿರುತ್ತಾರೆ ಎಂದು ನಾವು ಆಶಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.
ಬಿಜೆಪಿಯು ರೇಖಾ ಗುಪ್ತರನ್ನು ದಿಲ್ಲಿಯ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ಗುರುವಾರ ರಾಮಲೀಲಾ ಮೈದಾನದಲ್ಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದೆ. ಅವರೊಂದಿಗೆ ಇನ್ನಿತರ ಆರು ಬಿಜೆಪಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.