ಸುನೀತಾ ವಿಲಿಯಮ್ಸ್ ಅವರನ್ನು ಮೋದಿ ಕೊಂಡಾಡುತ್ತಿದ್ದಂತೆ ಸೋದರ ಸಂಬಂಧಿ ಹರೇನ್ ಪಾಂಡ್ಯ ʼಹತ್ಯೆʼ ಪ್ರಕರಣ ಉಲ್ಲೇಖಿಸಿ ಕಾಂಗ್ರೆಸ್ ಟೀಕೆ!
ಸುನೀತಾ ಅವರ ಸಾಧನೆ ಶ್ಲಾಘಿಸಿದ ಮೋದಿಯ ಪ್ರಾಮಾಣಿಕತೆ ಪ್ರಶ್ನಿಸಿದ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ / ಸುನಿತಾ ವಿಲಿಯಮ್ಸ್ / ಹರೇನ್ ಪಾಂಡ್ಯ (Photo credit: PTI)
ಹೊಸದಿಲ್ಲಿ: ನಾಸಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ 286 ದಿನಗಳ ಸುದೀರ್ಘ ವಾಸದ ಬಳಿಕ ಭೂಮಿಗೆ ವಾಪಾಸ್ಸಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಸುನಿತಾ ವಿಲಿಯಮ್ಸ್ ಅವರ ಸೋದರಸಂಬಂಧಿ ಹರೇನ್ ಪಾಂಡ್ಯ ಹತ್ಯೆ ಪ್ರಕರಣವನ್ನು ಮುಂದಿಟ್ಟು ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದೆ. ವಿಲಿಯಮ್ಸ್ ಅವರ ಸಾಧನೆಗಳನ್ನು ಕೊಂಡಾಡುವ ಮೋದಿಯವರ ಪ್ರಾಮಾಣಿಕತೆಯನ್ನು ಕಾಂಗ್ರೆಸ್ ಪಕ್ಷವು ಪ್ರಶ್ನಿಸಿದೆ.
ಕೇರಳ ಕಾಂಗ್ರೆಸ್ ಘಟಕ ಈ ಕರಿತು ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ʼಮೋದಿ ಸುನೀತಾ ವಿಲಿಯಮ್ಸ್ಗೆ ಪತ್ರ ಬರೆದಿದ್ದಾರೆ, ಆದ್ರೆ, ಅವರು ಅದನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಏಕೆ? ಅವರು ಹರೇನ್ ಪಾಂಡ್ಯ ಅವರ ಸೋದರಸಂಬಂಧಿ… ಅವರು ಮೋದಿಗೆ ಸವಾಲೆಸೆದರು ಮತ್ತು ಬೆಳಿಗ್ಗೆ ವಾಕಿಂಗ್ ತೆರಳಿದ್ದಾಗ ಕೊಲೆಯಾದರು. ಪಾಂಡ್ಯ ಅವರ ಸಾವಿನ ನಂತರ ಹಲವಾರು ಸರಣಿ ಕೊಲೆಗಳು ನಡೆದವು, ಅದು ಕೊಲೆ ಅಥವಾ ನ್ಯಾಯಮೂರ್ತಿ ಲೋಯಾ ಪ್ರಕರಣದಲ್ಲಿ ಕೊನೆಗೊಂಡಿತು. 2007ರ ಹಿಂದೆ ಅವರು ಅತ್ಯಂತ ಪ್ರಸಿದ್ಧ ಅನಿವಾಸಿ ಗುಜರಾತಿಯಾಗಿದ್ದರೂ ಕೂಡ, ಮೋದಿ ಅವರನ್ನು ನಿರ್ಲಕ್ಷಿಸಿದರು, ಈಗ ಅವರು ಕಾಳಜಿ ವಹಿಸುತ್ತಾರೆ ಎಂದು ಜಗತ್ತಿಗೆ ತೋರಿಸಲು ಬಯಸುತ್ತಾರೆʼ ಎಂದು ಹೇಳಿದೆ.
ಮೋದಿ ಜೊತೆ ಹರೇನ್ ಪಾಂಡ್ಯ ಸಂಬಂಧ ಚೆನ್ನಾಗಿರಲಿಲ್ಲ!
ಹರೇನ್ ಪಾಂಡ್ಯ ಅವರು ಬಿಜೆಪಿಯ ಕಟ್ಟಾಳು ಮತ್ತು ಗುಜರಾತ್ನ ಗೃಹ ಸಚಿವರಾಗಿದ್ದವರು. ಅವರು ಬಲವಾದ ಆರೆಸ್ಸೆಸ್ ಹಿನ್ನೆಲೆ ಮತ್ತು ರಾಜಕೀಯ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದರು. ಕೇಶುಭಾಯ್ ಪಟೇಲ್ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು. 2001ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಸಚಿವರಾಗಿ ಅಧಿಕಾರದಲ್ಲಿ ಮುಂದುವರಿದಿದ್ದರು.
ಆದರೆ, 2001ರಲ್ಲಿ ಪಾಂಡ್ಯ ಮತ್ತು ಮೋದಿ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಗುಜರಾತ್ ವಿಧಾನಸಭೆಗೆ ಮೋದಿಯ ಚುನಾವಣಾ ಪ್ರವೇಶಕ್ಕಾಗಿ ಎಲ್ಲಿಸ್ಬ್ರಿಡ್ಜ್(Ellisbridge) ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಡಲು ಪಾಂಡ್ಯ ನಿರಾಕರಿಸಿದರು. ಈ ಬೆಳವಣಿಗೆಯು ಗುಜರಾತ್ ಬಿಜೆಪಿಯೊಳಗೆ ಮೋದಿಯ ದೊಡ್ಡ ಎದುರಾಳಿಯನ್ನಾಗಿ ಮಾಡಿತು.
ಇಷ್ಟೇ ಅಲ್ಲದೆ, 2002ರ ಗುಜರಾತ್ ಗಲಭೆಯಲ್ಲಿ ಮೋದಿಯಪಾತ್ರದ ಬಗ್ಗೆ ಪಾಂಡ್ಯ ಅವರು ನ್ಯಾಯಮೂರ್ತಿ ವಿ ಆರ್ ಕೃಷ್ಣ ಅಯ್ಯರ್ ನೇತೃತ್ವದ ಸ್ವತಂತ್ರ ಸಮಿತಿಗೆ ಗೌಪ್ಯ ಸಾಕ್ಷ್ಯವನ್ನು ನೀಡಿದರು ಎಂದು ಹೇಳಲಾಗಿದೆ. ಇದರಿಂದಾಗಿ 2002ರಲ್ಲಿ ಮೋದಿ ಮತ್ತು ಹರೇನ್ ಪಾಂಡ್ಯ ಸಂಬಂಧ ಮತ್ತಷ್ಟು ಹಳಸಿತು. ಮಾಧ್ಯಮ ವರದಿ ಪ್ರಕಾರ, ಗೋಧ್ರಾ ರೈಲು ದಹನದ ನಂತರ ಹಿಂದೂ ಗುಂಪುಗಳಿಗೆ ಮುಕ್ತವಾಗಿ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶ ನೀಡುವಂತೆ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಪಾಂಡ್ಯ ಆರೋಪಿಸಿದ್ದರು.
ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಹರೇನ್ ಪಾಂಡ್ಯ ಅವರನ್ನು ಗುಜರಾತ್ ಗೃಹ ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು. 2002ರಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಯಿತು. ಅವರ ರಾಜಕೀಯ ಜೀವನವು ಬಹುಪಾಲು ಕೊನೆಗೊಂಡಿತು ಮತ್ತು ಬಿಜೆಪಿ ರಾಷ್ಟ್ರೀಯ ಸಮಿತಿಯಲ್ಲಿ ಸ್ಥಾನಮಾನ ಸಿಗುವ ನಿರೀಕ್ಷೆಯಿತ್ತು. ಇದಾದ ಕೆಲ ತಿಂಗಳ ನಂತರ ಅಂದರೆ 2003ರ ಮಾರ್ಚ್ 26ರಂದು ಬೆಳಿಗ್ಗೆ ವಾಕಿಂಗ್ ಹೋದ ವೇಳೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು.
ಹರೇನ್ ಪಾಂಡ್ಯ ಕೊಲೆ ಮತ್ತು ತನಿಖೆ :
ಹರೇನ್ ಪಾಂಡ್ಯ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ ಕೊಡಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಸಿಬಿಐ ಹರೇನ್ ಪಾಂಡ್ಯ ಅವರನ್ನು ಹತ್ಯೆ ನಡೆಸಿದ್ದು ʼಲಷ್ಕರ್-ಎ-ತೊಯ್ಬಾʼ ಎಂದು ಹೇಳಿತು. 2002ರ ಗಲಭೆಗೆ ಪ್ರತೀಕಾರವಾಗಿ ಈ ಹತ್ಯೆಯನ್ನು ನಡೆಸಿದೆ ಎಂದು ಹೇಳಿತು. ಆದರೆ, ಸಿಬಿಐ ತನಿಖಾ ವರದಿಯು ವ್ಯಾಪಕ ಟೀಕೆಗೆ ಗುರಿಯಾಯಿತು.
2007ರಲ್ಲಿ ಪ್ರಕರಣದಲ್ಲಿ ಗುಜರಾತ್ ವಿಚಾರಣಾ ನ್ಯಾಯಾಲಯ 12 ಜನರನ್ನು ಅಪರಾಧಿಗಳೆಂದು ಘೋಷಿಸಿತು. ಆದರೆ, ಗುಜರಾತ್ ಹೈಕೋರ್ಟ್ 2011ರಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ತನಿಖೆಯ ಹಾದಿ ತಪ್ಪಿದೆ ಎಂದು ಹೇಳಿತು. ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಮತ್ತು ಸಿಬಿಐ ಅನ್ನು ಕಟುವಾಗಿ ಟೀಕಿಸಿದ ನ್ಯಾಯಾಲಯ, ನಿಜವಾದ ಅಪರಾಧಿಗಳು ಅಜ್ಞಾತವಾಗಿದ್ದಾರೆ ಎಂದು ಹೇಳಿತು.
ಇದಲ್ಲದೆ, ಪಾಂಡ್ಯ ಅವರ ತಂದೆ ವಿಠ್ಠಲ್ ಪಾಂಡ್ಯ, ಮಗನ ಹತ್ಯೆಯಲ್ಲಿ ಮೋದಿ ಕೈವಾಡದ ಬಗ್ಗೆ ಪದೇ ಪದೇ ಆರೋಪಿಸಿದರು. ಸಂದರ್ಶನಗಳಲ್ಲಿ ʼನಿಜವಾದ ಸೂತ್ರಧಾರಿಗಳನ್ನು ರಕ್ಷಿಸಲಾಗಿದೆʼ ಎಂದು ಹೇಳಿದರು.
ಸುನಿತಾ ವಿಲಿಯಮ್ಸ್, ಹರೇನ್ ಪಾಂಡ್ಯ, ಮತ್ತು ಮೋದಿಯ ನಿರ್ಲಕ್ಷ್ಯ :
ʼದಿ ಟೆಲಿಗ್ರಾಫ್ʼ ವರದಿ ಪ್ರಕಾರ, ಸುನೀತಾ ವಿಲಿಯಮ್ಸ್ ಅವರು ಹರೇನ್ ಪಾಂಡ್ಯ ಅವರ ಸಂಬಂಧಿ ಮಾತ್ರವಲ್ಲ ಅವರ ಜೊತೆ ಆಳವಾದ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದರು. 1998ರಲ್ಲಿ ಹರೇನ್ ಪಾಂಡ್ಯ ಅವರ ಪರವಾಗಿ ಸುನೀತಾ ವಿಲಿಯಮ್ಸ್ ಚುನಾವಣಾ ಪ್ರಚಾರ ಮಾಡಿದರು, ಅವರ ವಿಜಯದ ಮೆರವಣಿಗೆಯಲ್ಲಿ ಭಾಗವಹಿಸಿದರು. ಸಾಧಕರನ್ನು ಗೌರವಿಸುವ ಗುಜರಾತ್ ಸಂಪ್ರದಾಯದ ಹೊರತಾಗಿಯೂ, ಮೋದಿ ನೇತೃತ್ವದ ಗುಜರಾತ್ ಸರಕಾರ 2007ರಲ್ಲಿ ಸುನೀತಾ ವಿಲಿಯಮ್ಸ್ ಅವರ ಸಾಧನೆಗಳನ್ನು ನಿರ್ಲಕ್ಷಿಸಿತು. ಗುಜರಾತ್ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ವಿಲಿಯಮ್ಸ್ ಅವರನ್ನು ಗೌರವಿಸುವ ನಿರ್ಣಯವನ್ನು ಪ್ರಸ್ತಾಪಿಸಿದರು. ಆದರೆ, ಬಿಜೆಪಿ ಮೌನವಾಗಿತ್ತು. ಇದರಿಂದಾಗಿ ʼವಿಶ್ವ ಗುಜರಾತಿ ಸಮಾಜʼವು ವಿಲಿಯಮ್ಸ್ ಅವರನ್ನು ಗೌರವಿಸದ ಮೋದಿ ಸರಕಾರವನ್ನು ಟೀಕಿಸಿತ್ತು.
2025ರಲ್ಲಿ, ಮೋದಿ ಇದ್ದಕ್ಕಿದ್ದಂತೆ ವಿಲಿಯಮ್ಸ್ ಅವರನ್ನು ವೈಯಕ್ತಿಕವಾಗಿ ಪತ್ರ ಬರೆದು ಶ್ಲಾಘಿಸಿದ್ದಾರೆ. ಸುನೀತಾ ಅವರನ್ನು ಭಾರತದ ಸುಪ್ರಸಿದ್ಧ ಹೆಣ್ಣುಮಕ್ಕಳಲ್ಲಿ ಓರ್ವರು ಎಂದು ಕರೆದರು. ಆದರೆ, ಕಾಂಗ್ರೆಸ್ ಪ್ರಧಾನಿ ಮೋದಿ ರಾಜಕೀಯ ಲಾಭಕ್ಕಾಗಿ ಮಾತ್ರ ಅವರನ್ನು ಈಗ ಗುರುತಿಸಿದ್ದಾರೆ ಎಂದು ಆರೋಪಿಸಿದೆ.