ಹರ್ಯಾಣದಲ್ಲಿ ಕಾಂಗ್ರೆಸ್ ಗೆ ಮತ್ತೆ ಹಿನ್ನಡೆ; 10 ರ ಪೈಕಿ 9 ಮೇಯರ್ ಹುದ್ದೆ ಬಿಜೆಪಿಗೆ

ಬಿಜೆಪಿಯ ವಿಜಯೋತ್ಸವ ಆಚರಿಸುತ್ತಿರುವ ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ PC: PTI
ಚಂಡೀಗಢ: ಕಳೆದ ಅಕ್ಟೋಬರ್ ತಿಂಗಳಲ್ಲಿ ಸತತ ಮೂರನೇ ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಬಿಜೆಪಿ ಬುಧವಾರ ನಡೆದ ಮೇಯರ್ ಚುನಾವಣೆಯಲ್ಲಿ ಕೂಡಾ ಪ್ರಾಬಲ್ಯ ಮುಂದುವರಿಸಿದೆ. 10 ಮೇಯರ್ ಹುದ್ದೆಗಳ ಪೈಕಿ 9 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಮೂಲಕ ಎದುರಾಳಿ ಕಾಂಗ್ರೆಸ್ ಗೆ ಆಘಾತ ನೀಡಿದೆ.
ಮಾರ್ಚ್ 2ರಂದು ನಡೆದ ಚುನಾವಣೆಯ ಬಳಿಕ ಪ್ರಮುಖ ಮಹಾನಗರ ಪಾಲಿಕೆಗಳಾದ ಗುರ್ಗಾಂವ್, ಫರೀದಾಬಾದ್, ಹಿಸ್ಸಾರ್, ರೋಹ್ಟಕ್, ಕರ್ನಲ್, ಯಮುನಾ ನಗರ, ಪಾಣಿಪತ್, ಅಂಬಾಲಾ ಮತ್ತು ಸೋನಿಪತ್ ಪಾಲಿಕೆಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. ಮನೇಸಾರ್ ಮಾತ್ರ ಇದಕ್ಕೆ ಹೊರತಾಗಿದ್ದು, ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಇಂದ್ರಜಿತ್ ಯಾದವ್ ಗೆಲುವು ಸಾಧಿಸಿದ್ದಾರೆ.
ಒಟ್ಟು 10 ಮೇಯರ್ ಹುದ್ದೆಗಳ ಪೈಕಿ ಏಳರಲ್ಲಿ ಮಹಿಳೆಯರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರವೀಣ್ ಜೋಶಿ ಫರೀದಾಬಾದ್ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಲತಾ ರಾಣಿ ವಿರುದ್ಧ 3,16,852 ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ.
ಈ ಅಭೂತಪೂರ್ವ ಗೆಲುವು ಪಕ್ಷದ ಉತ್ತಮ ಆಡಳಿತವನ್ನು ಜನತೆ ದೃಢೀಕರಿಸಿರುವುದಕ್ಕೆ ಉದಾಹರಣೆ ಎಂದು ಸಿಎಂ ನಯಾಬ್ ಸಿಂಗ್ ಸೈನಿ ಬಣ್ಣಿಸಿದ್ದಾರೆ. ಜನತೆ ತ್ರಿವಳಿ ಎಂಜಿನ್ ಸರ್ಕಾರವನ್ನು ಬಯಸಿದ್ದಾರೆ ಎನ್ನುವುದನ್ನು ಮತ್ತು ನಮ್ಮ ಅಭಿವೃದ್ಧಿ ಕಾರ್ಯವನ್ನು ಜನತೆ ಅನುಮೋದಿಸಿದ್ದಾರೆ ಎನ್ನುವುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಸ್ತುತಪಡಿಸಿದ ಸ್ಥಳೀಯ ಸಂಸ್ಥೆಗಳ ಖಾತೆ ಸಚಿವ ವಿಪುಲ್ ಗೋಯಲ್, ಒಟ್ಟು ಪಾಲಿಕೆ ಸದಸ್ಯರ ಪೈಕಿ ಶೇಕಡ 90ರಷ್ಟು ಮಂದಿ ಬಿಜೆಪಿ ಸದಸ್ಯರಿದ್ದಾರೆ ಎಂದು ಪ್ರಕಟಿಸಿದರು. ರೋಹ್ಟಕ್ ಲೋಕಸಭಾ ಕ್ಷೇತ್ರವನ್ನು ಗೆದ್ದಿರುವ ಕಾಂಗ್ರೆಸ್ ಗೆ ರೋಹ್ಟಕ್ ಮಹಾನಗರ ಪಾಲಿಕೆಯಲ್ಲಿ ಹಿನ್ನಡೆಯಾಗಿದ್ದು, ಇದು ವೈಯಕ್ತಿಕವಾಗಿ ಮಾಜಿ ಸಿಎಂ ಭೂಪೇಂದ್ರಸಿಂಗ್ ಹೂಡಾ ಅವರ ಸೋಲು ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ಶಾಸಕರಾದ ವಿನೇಶ್ ಫೋಗತ್ ಜುಲಾನಾದಲ್ಲಿ ಗೆಲುವು ಸಾಧಿಸಲು ವಿಫಲರಾಗಿದ್ದು, ಬಿಜೆಪಿ ಅಭ್ಯರ್ಥಿ ಇಲ್ಲಿ ಗೆಲುವಿನ ನಗೆ ಬೀರಿದ್ದಾರೆ.