ಪ್ರಧಾನಿ ಮೋದಿಯವರ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ : 18ನೇ ಲೋಕಸಭೆಗೆ ಮತದಾನ ಆರಂಭವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರ 'ಸಂಪತ್ತಿನ ಮರುಹಂಚಿಕೆ' ಕುರಿತ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷವು ಸೋಮವಾರ ಭಾರತೀಯ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಪ್ರಧಾನಿ ಮೋದಿಯವರ ಹೇಳಿಕೆಗಳು 'ದೇಶ ಒಡೆಯುವ ಮತ್ತು ದುರುದ್ದೇಶಪೂರಿತ' ಎಂದು ಪಕ್ಷ ಹೇಳಿದೆ.
"ಪ್ರಧಾನಿ ಹೊಂದಿರುವ ಸ್ಥಾನವನ್ನು ನಾವು ಗೌರವಿಸುತ್ತೇವೆ. ಅವರು ನಿಮಗೆ ಅಥವಾ ಬಿಜೆಪಿಗೆ ಹೇಗೆ ಪ್ರಧಾನಿಯೋ, ನಮಗೂ, ದೇಶಕ್ಕೂ ಪ್ರಧಾನಿಯೇ. ಸಂಯಮದಿಂದ ನಿರ್ವಹಿಸುವ ಉನ್ನತ ಸ್ಥಾನದ ಜವಾಬ್ದಾರಿ ಅವರಿಗಿದೆ. ದುರದೃಷ್ಟವಶಾತ್, ಅವರು ಉಲ್ಲೇಖಿಸಿದ ಹೇಳಿಕೆಯನ್ನು ನಾವೆಂದೂ ನಿರೀಕ್ಷಿಸಿರಲಿಲ್ಲ. ಅವರು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಸ್ಪಷ್ಟನೆ ನೀಡುವಂತೆ ನಾವು ಆಗ್ರಹಿಸುತ್ತೇವೆ ”ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ಮೋದಿಯವರ ವಿವಾದಿತ ಹೇಳಿಕೆಗಳ ಬಗ್ಗೆ ಚುನಾವಣಾ ಆಯೋಗದೊಂದಿಗಿನ ಸಭೆಯಲ್ಲಿ ಹೇಳಿದರು.
ಚುನಾವಣಾ ಸಮಿತಿಯನ್ನು ಭೇಟಿ ಮಾಡಿದ ನಂತರ ಸಿಂಘ್ವಿ, "ಪ್ರಧಾನಿ ಮೋದಿ ಅವರು ಒಂದು ಸಮುದಾಯವನ್ನು ಹೆಸರಿಸಿದ್ದಾರೆ. ಅವರು ಕೋಮು ಮತ್ತು ಸಮುದಾಯದ ಬಗ್ಗೆ ನಿರ್ದಾಕ್ಷಿಣ್ಯವಾಗಿ ಮಾತನಾಡಿದ್ದಾರೆ. ಅವರು ಸೆಕ್ಷನ್ 123 ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಉಲ್ಲಂಘಿಸಿದ ವ್ಯಕ್ತಿಯ ಸ್ಥಾನಮಾನವನ್ನು ಲೆಕ್ಕಿಸದೆ, ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.