ಪಟ್ಟಿ ಮಾಡಿದ ಅಪರಾಧದಲ್ಲಿ ಭಾಗಿಯಾಗಿದ್ದರೆ ಮಾತ್ರ PMLA ಅಡಿಯಲ್ಲಿ ಪಿತೂರಿ ಆರೋಪ ಮಾನ್ಯ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಿರ್ದಿಷ್ಟವಾಗಿ ಪಟ್ಟಿ ಮಾಡಲಾಗಿರುವ ಅನುಸೂಚಿತ ಅಪರಾಧದ ಪಿತೂರಿಯಲ್ಲಿ ಭಾಗಿಯಾಗಿದ್ದರೆ ಮಾತ್ರ ಯಾವುದೇ ವ್ಯಕ್ತಿಯ ವಿರುದ್ಧ ಆ ಕಾಯ್ದೆಯಡಿ ಕ್ರಿಮಿನಲ್ ಪಿತೂರಿ ಪ್ರಕರಣವನ್ನು ದಾಖಲಿಸಿಕೊಳ್ಳಬಹುದಾಗಿದೆ ಎಂದು ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು thehindu.com ವರದಿ ಮಾಡಿದೆ.
“ಒಂದು ವೇಳೆ ಕಾಯ್ದೆಯ ಅನುಸೂಚಿಯಲ್ಲಿ ನಿರ್ದಿಷ್ಟವಾಗಿ ಸೇರ್ಪಡೆ ಮಾಡಲಾಗಿರುವ ಅಪರಾಧವನ್ನು ನಡೆಸಿದ ಪಿತೂರಿ ಆರೋಪವಿದ್ದಾಗ ಮಾತ್ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಅಡಿ ದಂಡನಾರ್ಹ ಅಪರಾಧವಾಗಲಿದೆ” ಎಂದು ನ್ಯಾ. ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದೆ.
ಇದೇ ವೇಳೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅನುಸೂಚಿತ ಅಪರಾಧಗಳ ಭಾಗ Aಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B ಅನ್ನು ಸೇರ್ಪಡೆ ಮಾಡಲಾಗಿದೆ ಎಂಬ ಜಾರಿ ನಿರ್ದೇಶನಾಲಯದ ವಾದವನ್ನು ನ್ಯಾಯಾಲಯವು ತಳ್ಳಿ ಹಾಕಿತು. ಈ ವಾದದ ಪ್ರಕಾರ, ಅಪರಾಧವನ್ನೆಸಗಲು ನಡೆಸಿದ ಕ್ರಿಮಿನಲ್ ಪಿತೂರಿಯು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅನುಸೂಚಿಯ ಭಾಗವಾಗಿರದಿದ್ದರೂ, ಆ ಅಪರಾಧವನ್ನು ಅನುಸೂಚಿತ ಅಪರಾಧವೆಂದು ಪರಿಗಣಿಸಬಹುದಾಗಿದೆ.
“ಈ ತರ್ಕದನ್ವಯ, ಅಪರಾಧವು ಅನುಸೂಚಿಯ ಭಾಗವಾಗಿರದಿದ್ದರೂ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120Bಯನ್ನು ಅನ್ವಯಿಸುವ ಮೂಲಕ, ಯಾವುದೇ ದಂಡ ಸಂಹಿತೆಯ ಅಡಿ ಅಪರಾಧವೆಸಗಲು ಪಿತೂರಿ ನಡೆಸಿದ ಆರೋಪದಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ಹುಟ್ಟು ಹಾಕಬಹುದಾಗಿದೆ. ಆದರೆ, ಇದು ಶಾಸನದ ಉದ್ದೇಶವಾಗಿರಲು ಸಾಧ್ಯವಿಲ್ಲ” ಎಂದು ನ್ಯಾ. ಓಕಾ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.
ಕೆಲವು ಆಯ್ದ ಅಪರಾಧಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅನುಸೂಚಿತ ಅಪರಾಧಗಳನ್ನಾಗಿಸಬಹುದು ಎಂಬ ಜಾರಿ ನಿರ್ದೇಶನಾಲಯದ ವ್ಯಾಖ್ಯಾನವು ಶಾಸನಾತ್ಮಕ ಉದ್ದೇಶವನ್ನು ಪರಾಭವಗೊಳಿಸಲಿದೆ ಎಂದೂ ನ್ಯಾಯಾಲಯ ಹೇಳಿದೆ.