ಮುಂದುವರಿದ ಮಣಿಪುರ ಹಿಂಸಾಚಾರ: ಉನ್ನತ ಪೊಲೀಸ್ ಅಧಿಕಾರಿ ಅಮಾನತು
PC: x.com/BinaNepram
ಗುವಾಹತಿ: ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿದಿದೆ. 23 ವರ್ಷದ ಪ್ರತಿಭಟನಾಕಾರರೊಬ್ಬರು ಪೊಲೀಸರ ಗುಂಡಿಗೆ ಬಲಿಯಾದ ಬೆನ್ನಲ್ಲೇ ಮಣಿಪುರ ಸರ್ಕಾರ ಮಾಜಿ ಸೇನಾ ಅಧಿಕಾರಿ ಹಾಗೂ ಎಸ್ಎಸ್ ಪಿಯ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಪೊಲೀಸ್ ದಾಳಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್ಎಸ್ಪಿ ನೆಕ್ಟರ್ ಸಂಜೆನ್ ಬಾಮ್ ಅವರನ್ನು ಅಮಾನತು ಮಾಡಲಾಗಿದೆ. ಸೇನೆಯ ಮಾಜಿ ಕರ್ನಲ್ ಆಗಿದ್ದ ಇವರು ಕೀರ್ತಿ ಚಕ್ರ ವಿಜೇತರೂ ಆಗಿದ್ದರು. ಸಂಜೆನ್ ಬಾಮ್ ನೇತೃತ್ವದ ಪಡೆ, ಪ್ರತಿಭಟನಾಕಾರರ ಮೇಲೆ ಗುಂಡು ಹಾಕಿಸಿದಾಗ ಖುಂದ್ರಕ್ ಪಾಮ್ ಅತೋಬಾ ಸಿಂಗ್ ಎಂಬ ವ್ಯಕ್ತಿ ಮೃತಪಟ್ಟಿದ್ದರು.
ಮೂವರು ಸ್ಥಳಾಂತರಿತ ಮೀಟಿ ಮಹಿಳೆಯರು ಮತ್ತು ಮೂವರು ಮಕ್ಕಳು ಈ ತಿಂಗಳ 11ರಿಂದ ನಾಪತ್ತೆಯಾಗಿದ್ದು, ಇವರ ಶಂಕಿತ ಅಪಹರಣ ಮತ್ತು ಹತ್ಯೆಯ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಮತ್ತೊಬ್ಬ ಪ್ರತಿಭಟನಾಕಾರ ಕೀಸಮ್ ಬೆನ್ಸನ್ (30) ಗಾಯಗೊಂಡಿದ್ದಾರೆ. ಇವರಿಗೆ ಗುಂಡೇಟಿನ ಗಾಯಕ್ಕಾಗಿ ಸಿಲ್ಚೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಣಿಪುರದಲ್ಲಿ ಮೀಟಿ ಜನರು ಹೆಚ್ಚಾಗಿ ವಾಸಿಸುತ್ತಿರುವ ಸ್ಥಳಗಳಲ್ಲಿ ಮತ್ತು ಪಕ್ಕದ ಅಸ್ಸಾಂನ ಕಚಾರ್ ಜಿಲ್ಲೆಗಳಲ್ಲಿ ಖುಂದ್ರಕ್ ಪಾಮ್ ಸಾವಿನ ಬಳಿಕ ಪ್ರತಿಭಟನೆ ವ್ಯಾಪಕವಾಗಿದೆ. ಪೊಲೀಸರು ಹಾರಿಸಿದ ಗುಂಡಿಗೆ ಯುವಕ ಬಲಿಯಾದ ಬೆನ್ನಲ್ಲೇ ಗುಪ್ತಚರ ವಿಭಾಗದ ಐಜಿಪಿ ಕೆ.ಕಬೀಬ್ ನೇತೃತ್ವದಲ್ಲಿ ಇಬ್ಬರು ಸದಸ್ಯರ ತಂಡವನ್ನು ರಚಿಸಿರುವ ಬಿರೇನ್ ಸಿಂಗ್ ಅವರು ಘಟನೆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿ ನೆಕ್ಟರ್ ಅವರನ್ನು ಅಮಾನತುಗೊಳಿಸಿದೆ.
ಸೇನೆಯ 21 ಪ್ಯಾರಾ (ವಿಶೇಷ ಪಡೆ) ಅಧಿಕಾರಿಯಾಗಿದ್ದ ನೆಕ್ಟರ್, 2015ರಲ್ಲಿ ಮ್ಯಾನ್ಮಾರ್ ಗಡಿಗೆ ನುಗ್ಗಿ ದಾಳಿ ನಡೆಸಿದ ತಂಡದಲ್ಲಿದ್ದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಸಂಘರ್ಷವನ್ನು ನಿಭಾಯಿಸುವ ಉದ್ದೇಶದಿಂದ ಸಚಿವ ಸಂಪುಟದ ವಿಶೇಷ ನಿರ್ಣಯದಂತೆ ಇವರನ್ನು 2023ರ ಆಗಸ್ಟ್ ನಲ್ಲಿ ಪೊಲೀಸ್ ಸೇವೆಗೆ ನಿಯೋಜಿಸಿಕೊಳ್ಳಲಾಗಿತ್ತು.