150 ಕೋಟಿ ರೂ. ಹಗರಣದಲ್ಲಿ ದೋಷಿ; ಕಾಂಗ್ರೆಸ್ ಶಾಸಕ ಸುನೀಲ್ ಕೇದಾರ್ ಅನರ್ಹ
Photo: twitter.com/ourneta
ನಾಗ್ಪುರ: ಬಹುಚರ್ಚಿತ ನಾಗ್ಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ 150 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕಾಂಗ್ರೆಸ್ ಶಾಸಕ ಸುನೀಲ್ ಕೇದಾರ್ ಅವರನ್ನು ದೋಷಿ ಎಂದು ಘೋಷಿಸಿದ ಬೆನ್ನಲ್ಲೇ, ಮಹಾರಾಷ್ಟ್ರ ಶಾಸಕಾಂಗ ಸೆಕ್ರೆಟರಿಯೇಟ್ ಶನಿವಾರ ಕಳಂಕಿತ ಶಾಸಕನನ್ನು ಶಾಸಕತ್ವದಿಂದ ಅನರ್ಹಗೊಳಿಸಿದೆ.
ಕೇದಾರ್ ಅನರ್ಹತೆ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದ್ದರೆ, ಬಿಜೆಪಿ ಇದನ್ನು ಸ್ವಾಗತಿಸಿದೆ. ಬಿಜೆಪಿ ಶಾಸಕರು ಶಿಕ್ಷೆಗೆ ಗುರಿಯಾದ ಸಂದರ್ಭದಲ್ಲಿ ಕೂಡಾ ಇದೇ ತುರ್ತು ನಿರ್ಧಾರವನ್ನು ಸರ್ಕಾರ ಏಕೆ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.
ಶಾಸಕಾಂಗ ಕಾರ್ಯದರ್ಶಿ ಜಿತೇಂದ್ರ ಭೋಲೆ ಈ ಸಂಬಂಧ ಗಜೆಟ್ ಅಧಿಸೂಚನೆ ಹೊರಡಿಸಿದ್ದು, ಸವೊನೇರ್ ನ ಮಾಜಿ ಸಚಿವರನ್ನು ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ), ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ದೋಷಿ ಎಂದು ಪರಿಗಣಿಸಿ ಶುಕ್ರವಾರ ಐದು ವರ್ಷ ಕಠಿಣ ಶಿಕ್ಷೆ ಮತ್ತು 12.5 ಲಕ್ಷ ರೂಪಾಯಿ ದಂಡ ವಿಧಿಸಿರುವುದನ್ನು ಉಲ್ಲೇಖಿಸಲಾಗಿದೆ.
ಭಾರತ ಸಂವಿಧಾನದ 191(1)(ಇ) ವಿಧಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 8ರ ಅನ್ವಯ ಸುನೀಲ್ ಛತ್ರಪಾಲ್ ಕೇದಾರ್ ಅವರನ್ನು ಡಿಸೆಂಬರ್ 22ರಿಂದ ಮಹಾರಾಷ್ಟ್ರ ಶಾಸಕಾಂಗದಿಂದ ಅನರ್ಹಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಸಂವಿಧಾನದ 190ನೇ ವಿಧಿಯ ನಿಯಮ (3) ಉಪನಿಯಮ (ಎ) ಅನ್ವಯ ಈ ಕ್ಷೇತ್ರ ಖಾಲಿ ಉಳಿದಿದೆ ಎಂದು ವಿವರಿಸಲಾಗಿದೆ.