ದೋಷಿಗಳು ಬಿಲ್ಕಿಸ್ ರನ್ನು ರಕ್ತದಾಹಿಗಳಂತೆ ಬೆನ್ನಟ್ಟಿದ್ದರು: ಸುಪ್ರೀಂಕೋರ್ಟ್ ನಲ್ಲಿ ಬಿಲ್ಕಿಸ್ ಪರ ನ್ಯಾಯವಾದಿ ವಾದ ಮಂಡನೆ
ಅಪರಾಧಿಗಳ ಜೈಲುಶಿಕ್ಷೆ ರದ್ದತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ
ಹೊಸದಿಲ್ಲಿ: 2002ರ ಗುಜರಾತ್ ಗಲಭೆಯ ಸಂದರ್ಭ ಬಿಲ್ಕಿಸ್ ಬಾನುರನ್ನು ಸಾಮೂಹಿಕ ಅತ್ಯಾಚಾರಗೈದು, ಆಕೆಯ ಕುಟುಂಬದ ಏಳು ಮಂದಿ ಸದಸ್ಯರನ್ನು ಹತ್ಯೆಗೈದ ಪ್ರಕರಣದ ಆರೋಪಿಗಳು ರಕ್ತದಾಹಿಗಳಂತೆ ಮುಸ್ಲಿಮರನ್ನು ಬೆನ್ನಟ್ಟಿ ಕೊಲ್ಲುವ ಮನಸ್ಥಿತಿಯನ್ನು ಹೊಂದಿದ್ದರೆಂದು ಸುಪ್ರೀಂಕೋರ್ಟ್ಗೆ ಸಂತ್ರಸ್ತೆ ಪರ ವಕೀಲರು ತಿಳಿಸಿದ್ದಾರೆ.
ಪ್ರಕರಣದ ಎಲ್ಲಾ 11 ಮಂದಿ ಅಪರಾಧಿಗಳಿಗೆ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ಗುಜರಾತ್ ಸರಕಾರದ ಆದೇಶವನ್ನು ಪ್ರಶ್ನಿಸಿಸುವ ಕುರಿತಾದ ಅರ್ಜಿಗಳ ಕುರಿತಾಗಿ ವಾದ ಆರಂಭಿಸಿದ ಬಿಲ್ಕಿಸ್ ಬಾನು ಪರ ನ್ಯಾಯವಾದಿ ಶೋಭಾ ಗುಪ್ತಾ ಅವರು, ‘‘ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ ದೋಷಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಹಾಗೂ ಆಕೆಯ ಮೊದಲ ಮಗುವನ್ನು ಬಂಡೆಕಲ್ಲಿಗೆ ಜಜ್ಜಿ ಕೊಂದಿದ್ದರು’’ ಎಂದು ನ್ಯಾಯಾಲಯದ ಗಮನಸೆಳೆದರು.
‘‘ತಾನು ನಿಮಗೆ ಸೋದರಿ ಸಮಾನ, ನೀವೆಲ್ಲರೂ ಆಸುಪಾಸಿನ ಪ್ರದೇಶದವರಾಗಿದ್ದು ನಾನು ನಿಮ್ಮನ್ನು ತಿಳಿದಿದ್ದೇನೆ ಎಂದು ಗೋಗರೆದರೂ ಅವರು ಕೇಳಲಿಲ್ಲ. ಇದೊಂದು ಕ್ಷಣಿಕ ಆವೇಶದಲ್ಲಿ ನಡೆದ ಘಟನೆಯಲ್ಲ. ಮುಸ್ಲಿಮರನ್ನು ಬೇಟೆಯಾಡಿ ಕೊಲ್ಲುವ ಮನಸ್ಥಿತಿಯಿರುವ ಈ ದೋಷಿಗಳು ಬಿಲ್ಕಿಸ್ ರನ್ನು ರಕ್ತದಾಹಿಗಳಂತೆ ಬೆನ್ನಟ್ಟಿದ್ದರು. ‘ಇವರೆಲ್ಲಾ ಮುಸ್ಲಿಮರು, ಅವರನ್ನು ಕೊಲ್ಲಿ ’ ಎಂಬಿತ್ಯಾದಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು. ಅವರು ನಡೆಸಿದ್ದ ಅಪರಾಧವು ಅತ್ಯಂತ ಅಪರೂಪವಾದದ್ದು, ಅಸಾಮಾನ್ಯ ಹಾಗೂ ಕೋಮುದ್ವೇಷದಿಂದ ಪ್ರೇರಿತವಾಗಿತ್ತು ಎಂದು ಗುಪ್ತಾ ಅವರು ನಾಗರತ್ನ ಹಾಗೂ ಉಜ್ಜತಲ ಭೂಯಾನ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದ್ದರು.
ಬಿಲ್ಕಿಸ್ ಬಾನು ಪ್ರಕರಣದ ಅವರ ಜೈಲು ಶಿಕ್ಷೆ ಅವಧಿ ಪೂರ್ಣಗೊಳ್ಳುವ ಮೊದಲೇ ದೋಷಿಗಳನ್ನು ಬಿಡುಗಡೆಗೊಳಿಸಿರುವುದನ್ನು ಸಿಬಿಐ ವಿರೋಧಿಸಿತ್ತು ಹಾಗೂ ದೋಷಿಗಳು ಕ್ಷಮಿಸಲಾಗದಂತಹ ಅಪರಾಧವನ್ನು ಎಸಗಿದ್ದು, ಅವರ ಬಿಡುಗಡೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವುದೆಂದು ಅದು ಹೇಳಿತ್ತೆಂದು ಶೋಭಾ ಗುಪ್ತಾ ನೆನಪಿಸಿದರು.
ಬಿಲ್ಕಿಸ್ ಬಾನು ಅತ್ಯಾಚಾರ ಹಾಗೂ ಆಕೆಯ ಕುಟುಂಬದ ಏಳು ಮಂದಿ ಸದಸ್ಯರನ್ನು ಹತ್ಯೆಗೈದ ಪ್ರಕರಣದ 11 ಆರೋಪಿಗಳ ಜೈಲು ಶಿಕ್ಷೆ ರದ್ದತಿಯನ್ನು ಪ್ರಶ್ನಿಸುವ ಅರ್ಜಿಗಳ ಅಂತಿಮ ಆಲಿಕೆಯು ಆಗಸ್ಟ್ 7ರಿಂದ ಆರಂಭಗೊಳ್ಳಲಿದೆ.
ಬಿಲ್ಕಿಸ್ ಬಾನು ಅರ್ಜಿಯ ಜೊತೆಗೆ ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತ ರೇವತಿ ಲಾಲ್, ಲಕ್ನೋ ವಿವಿಯ ಮಾಜಿ ಉಪಕುಲಪತಿ ರೂಪ ಲೇಖಾ ವರ್ಮಾ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಇತರ ಹಲವಾರು ಮಂದಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಸಲ್ಲಿಸಿದ್ದರು.