ಹಾವಿನ ವಿಷ ಪ್ರಕರಣ: ಬಲಪಂಥೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ಶಾಮೀಲಾತಿ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ವರ್ಗಾವಣೆ
ಎಲ್ವಿಶ್ ಯಾದವ್ (Photo: Instagram)
ನೊಯ್ಡಾ: ಬಲಪಂಥೀಯ ಯೂಟ್ಯೂಬರ್ , ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಆರೋಪಿಯಾಗಿರುವ ಹಾವಿನ ವಿಷದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ನೊಯ್ಡಾದ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಒಬ್ಬರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ವರ್ಗಾವಣೆಗೊಳಿಸಲಾದ ಎಸ್ಸೈ ಸಂದೀಪ್ ಚೌಧುರಿ ಅವರು ನೊಯ್ಡಾದ ಸೆಕ್ಟರ್ 49 ಪೊಲೀಸ್ ಠಾಣಾಧಿಕಾರಿಯಾಗಿದ್ದು ಇದೀಗ ರಿಸರ್ವ್ ಪೊಲೀಸ್ ಲೈನ್ಗೆ ವರ್ಗಾವಣೆಗೊಳಿಸಲಾಗಿದೆ.
ಅವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಅಪರಾಧವನ್ನು ನಿಯಂತ್ರಿಸಲು ಅಸಮರ್ಥರಾಗಿರುವುದರಿಂದ ಅವರನ್ನು ವರ್ಗಾಯಿಸಲಾಗಿದೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ರೇವ್ ಪಾರ್ಟಿಗಳಲ್ಲಿ ಹಾವಿನ ವಿಷಯವನ್ನು ಬಳಸಿದ್ದಾರೆಂಬ ಆರೋಪದ ಮೇಲೆ ವನ್ಯಜೀವಿ (ಸಂರಕ್ಷಣಾ) ಕಾಯಿದೆ ಮತ್ತು ಐಪಿಸಿಯ ಸೆಕ್ಷನ್ಗಳಡಿಯಲ್ಲಿ ಸಾಮಾಜಿಕ ಜಾಲತಾಣ ಇನ್ಫ್ಲೂಯೆನ್ಸರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ಸಹಿತ ಆರು ಮಂದಿಯ ವಿರುದ್ಧ ನೊಯ್ಡಾದ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಐದು ಮಂದಿ ಆರೋಪಿಗಳನ್ನು ನವೆಂಬರ್ 3ರಂದು ಬಂಧಿಸಲಾಗಿತ್ತು. ಐದು ನಾಗರಹಾವುಗಳು ಸೇರಿದಂತೆ 9 ಹಾವುಗಳನ್ನು ಬಾಂಕ್ವೆಟ್ ಹಾಲ್ ಒಂದರಿಂದ ರಕ್ಷಿಸಲಾಗಿತ್ತಲ್ಲದೆ ಹಾವಿನ ವಿಷ ಎಂದು ತಿಳಿಯಲಾದ 20 ಎಂ ಎಲ್ ದ್ರವವನ್ನೂ ಅವರಿಂದ ವಶಪಡಿಸಿಕೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ನವೆಂಬರ್ 3ರಂದು ಘಟನೆ ನಡೆದ ಸಂದರ್ಭ ಸ್ಥಳದಲ್ಲಿರದೇ ಇದ್ದ ಯಾದವ್ ಅವರ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಪ್ಪತ್ತಾರು ವರ್ಷದ ಎಲ್ವಿಶ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ ಹಾಗೂ ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಪೀಪಲ್ ಫಾರ್ ಅನಿಮಲ್ಸ್ ಎಂಬ ಪ್ರಾಣಿ ಹಕ್ಕುಗಳ ಸಂಘಟನೆಯ ಅಧಿಕಾರಿಯೊಬ್ಬರು ಈ ದೂರು ದಾಖಲಿಸಿದ್ದರು. ಈ ಸಂಘಟನೆಯ ಅಧ್ಯಕ್ಷೆ, ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ಎಲ್ವಿಶ್ ಯಾದವ್ ಮೇಲೆ ಆರೋಪ ಹೊರಿಸಿ ಆತ ಅಕ್ರಮವಾಗಿ ಹಾವಿನ ವಿಷ ಮಾರಾಟ ಮಾಡುತ್ತಿದ್ದಾರೆಂದು ಹೇಳಿದ್ದಾರಲ್ಲದೆ ಆತನ ತಕ್ಷಣ ಬಂಧನಕ್ಕೆ ಆಗ್ರಹಿಸಿದ್ದಾರೆ.
ನವೆಂಬರ್ 4ರಂದು ಎಲ್ವಿಶ್ ರಾಜಸ್ಥಾನದ ಕೋಟಾದಲ್ಲಿ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ಧಾಗ ಪೊಲೀಸರು ಅವರನ್ನು ತಡೆದರಾದರೂ ಕೆಲವೇ ಹೊತ್ತಿನಲ್ಲಿ ಅವರಿಗೆ ತೆರಳಲು ಅನುಮತಿಸಿದ್ದಾರೆ.
ಎಲ್ವಿಶ್ ಅವರು ನೊಯ್ಡಾ ಪೊಲೀಸರಿಗೆ ಬೇಕಾದವರು ಎಂಬ ಕಾರಣಕ್ಕೆ ಕೋಟಾ ಪೊಲೀಸರು ನೊಯ್ಡಾದ ಪೊಲೀಸರನ್ನು ಸಂಪರ್ಕಿಸಿದ್ದರು.
ಆಗ ಪ್ರತಿಕ್ರಿಯಿಸಿದ್ದ ನೊಯ್ಡಾ ಪೊಲೀಸರು ಪ್ರಕರಣದ ತನಿಖೆ ನಡೆಯುತ್ತಿದೆ ಆದರೆ ಯಾದವ್ ಅವರು ಬೇಕಾದವರಲ್ಲ ಎಂದು ಹೇಳಿದರೆಂದು ಕೋಟಾದ ಪೊಲೀಸ್ ಅಧಿಕಾರಿ ವಿಷ್ಣು ಸಿಂಗ್ ತಿಳಿಸಿದ್ದಾರೆ.
ಯೂಟ್ಯೂಬ್ನಲ್ಲಿ 7 ಮಿಲಿಯನ್ ಚಂದಾದಾರರನ್ನು ಹೊಂದಿರುವ ಬಲಪಂಥೀಯ ವಿಚಾರಧಾರೆಯ ಎಲ್ವಿಶ್ ಯಾದವ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಬಿಗ್ ಬಾಸ್ ಒಟಿಟಿ ಯಲ್ಲಿ ಜಯ ಗಳಿಸಿದ ಬಳಿಕ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಎಲ್ವಿಶ್ ಅಭಿನಂದಿಸಿ, ಸನ್ಮಾನ ಮಾಡಿದ್ದರು.
ಹಾವಿನ ವಿಷ ಪ್ರಕರಣದಲ್ಲಿ ಎಲ್ವಿಶ್ ಹೆಸರು ಕೇಳಿ ನರುತ್ತಿದ್ದಂತೆಯೇ ಅವರು ಕೇಂದ್ರ ಸಚಿವರೊಂದಿಗಿರುವ ಫೋಟೊಗಳು ವೈರಲ್ ಆಗಿತ್ತು.