ಹಕ್ಕುಸ್ವಾಮ್ಯ ವಿವಾದ | 20 ಲಕ್ಷ ರೂ.ಠೇವಣಿಯಿರಿಸಲು ರಕ್ಷಿತ್ ಶೆಟ್ಟಿಗೆ ದಿಲ್ಲಿ ಹೈಕೋರ್ಟ್ ಆದೇಶ

ರಕ್ಷಿತ್ ಶೆಟ್ಟಿ
ಹೊಸದಿಲ್ಲಿ : ಎಂಆರ್ಟಿ ಮ್ಯೂಸಿಕ್ ಕಂಪನಿಯು ಮಾಡಿರುವ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ದಿಲ್ಲಿ ಉಚ್ಛ ನ್ಯಾಯಾಲಯವು 20 ಲಕ್ಷ ರೂ.ಗಳನ್ನು ಠೇವಣಿ ಇರಿಸುವಂತೆ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿಯವರಿಗೆ ಆದೇಶಿಸಿದೆ.
ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಬ್ಯಾಚಲರ್ ಪಾರ್ಟಿ’ ಚಿತ್ರದಲ್ಲಿ‘ನ್ಯಾಯ ಎಲ್ಲಿದೆ’ ಹಾಡನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪವು ಪ್ರಕರಣದ ಕೇಂದ್ರಬಿಂದುವಾಗಿದೆ.
ನವೀನ್ ಕುಮಾರ್ ಪ್ರತಿನಿಧಿಸಿರುವ ಎಂಆರ್ಟಿ ಮ್ಯೂಸಿಕ್ ದಿಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದು,‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡುಗಳನ್ನು ಸೂಕ್ತ ಅನುಮತಿ ಪಡೆದುಕೊಳ್ಳದೆ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಪ್ರತಿಪಾದಿಸಿದೆ. ದೂರಿನ ಆಧಾರದಲ್ಲಿ ಬೆಂಗಳೂರಿನ ಯಶವಂತಪುರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ಸಲ್ಲಿಕೆಯಾಗಿದ್ದು, ಹಕ್ಕುಸ್ವಾಮ್ಯ ಕಾಯ್ದೆಯ ಕಲಂ 63ರಡಿ ಪ್ರಕರಣ ದಾಖಲಾಗಿದೆ.
ಸಮನ್ಸ್ ಜಾರಿಗೊಂಡಿದ್ದರೂ ಶೆಟ್ಟಿ ದಿಲ್ಲಿ ಉಚ್ಛ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಇದಕ್ಕೆ ಪ್ರತಿಯಾಗಿ ನ್ಯಾಯಾಲಯವು 20 ಲಕ್ಷ ರೂ.ಗಳನ್ನು ಠೇವಣಿ ಇರಿಸುವಂತೆ ಶೆಟ್ಟಿ ಮತ್ತು ಪರಂವಃ ಸ್ಟುಡಿಯೋಸ್ಗೆ ಆದೇಶಿಸಿರುವುದು ಮಾತ್ರವಲ್ಲ, ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿರುವ ಹಾಡನ್ನು ತೆಗೆಯುವಂತೆಯೂ ತಾಕೀತು ಮಾಡಿದೆ.
ಶೆಟ್ಟಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಠಾಣೆಯಲ್ಲಿ ವಿಚರಣೆಯನ್ನು ಎದುರಿಸಿದ್ದಾರೆ. ದಿಲ್ಲಿ ಉಚ್ಛ ನ್ಯಾಯಾಲಯದ ಆದೇಶವು ಶೆಟ್ಟಿ ಮತ್ತು ಅವರ ಸ್ಟುಡಿಯೋದ ಮೇಲೆ ಗಂಭೀರ ಪರಿಣಾಮಗಳೊಂದಿಗೆ ಹಾಲಿ ನಡೆಯುತ್ತಿರುವ ಕಾನೂನು ಸಮರದಲ್ಲಿ ಮಹತ್ವದ ಹೆಜ್ಜೆಯಾಗಿದೆ.