ಪ್ರಾಮಾಣಿಕ ಕಾರ್ಯಕರ್ತರ ಮೂಲೆಗುಂಪು: ಪಕ್ಷ ತೊರೆದ ಬಿಜೆಪಿ ಉಪಾಧ್ಯಕ್ಷೆ
PC: x.com/yadavsantoshBJP
ಚಂಡೀಗಢ: ವಿಧಾನಸಭಾ ಚುನಾವಣೆ ನಡೆಯಲಿರುವ ಹರ್ಯಾಣದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ತೀವ್ರ ಹಿನ್ನಡೆ ಎದುರಾಗಿದೆ. ಪಕ್ಷಕ್ಕೆ ಪ್ರಾಮಾಣಿಕವಾಗಿ ಶ್ರಮಿಸಿದ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ, ಸಂಘಟನೆಗಾಗಿ ಎಂದೂ ದುಡಿಯದ ಮುಖಂಡರಿಗೆ ಆದ್ಯತೆ ನೀಡಿರುವ ಪಕ್ಷದ ಕ್ರಮವನ್ನು ಖಂಡಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಹರ್ಯಾಣ ಚುನಾವಣೆಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಪಕ್ಷಕ್ಕೆ ಹಲವು ಮಂದಿ ಮುಖಂಡರು ರಾಜೀನಾಮೆ ನೀಡುತ್ತಿದ್ದಾರೆ. ಇದೀಗ ರಾಜೀನಾಮೆ ನೀಡಿರುವ ಸಂತೋಷ್ ಯಾದವ್ ವಿಧಾನಸಭೆಯ ಮಾಜಿ ಉಪ ಸ್ಪೀಕರ್. ಯಾದವ್ ಅಟೇಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರ ಪುತ್ರಿ ಆರತಿ ಸಿಂಗ್ ರಾವ್ ಅವರನ್ನು ಈ ಕ್ಷೇತ್ರದಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಮಂಗಳವಾರ ಬಿಜೆಪಿ 21 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿತ್ತು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಹಿಂದಿಯಲ್ಲಿ ಪತ್ರ ಬರೆದಿರುವ ಶ್ರೀಮತಿ ಯಾದವ್, "ನನ್ನ ಪಕ್ಷ ನಿಷ್ಠೆ ಅಚಲ ಹಾಗೂ ಪಕ್ಷದ ನೀತಿ ಹಾಗೂ ಸಿದ್ಧಾಂತಗಳನ್ನು ಎಂತಹ ಪರಿಸ್ಥಿತಿಯಲ್ಲೂ ಅನುಸರಿಸುತ್ತಾ ಬಂದಿದ್ದೆ" ಎಂದು ಹೇಳಿದ್ದಾರೆ.
"ಬೇಸರದ ವಿಚಾರವೆಂದರೆ ತಳಮಟ್ಟದಲ್ಲಿ ಪ್ರಾಮಾಣಿಕ ಹಾಗೂ ಸಮರ್ಪಣಾ ಮನೋಭಾವದಿಂದ ಹೋರಾಟ ಮಾಡುತ್ತಾ ಬಂದ ನಾಯಕರನ್ನು ಪಕ್ಷ ಕಡೆಗಣಿಸುತ್ತಿದೆ. ಇಂತಹ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಿ, ಪಕ್ಷಕ್ಕಾಗಿ ಅಥವಾ ಕ್ಷೇತ್ರದ ನಾಗರಿಕರಿಗಾಗಿ ಏನನ್ನೂ ಮಾಡದ ವ್ಯಕ್ತಿಗಳಿಗೆ ಮಣೆ ಹಾಕಲಾಗುತ್ತಿದೆ. ಈ ಪರಿಸ್ಥಿತಿ ದುರದೃಷ್ಟಕರ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಅತೃಪ್ತಿ ಹಾಗೂ ಅಸಮಾಧಾನ ಹರಡುತ್ತಿದೆ" ಎಂದು ವಿವರಿಸಿದ್ದಾರೆ.
ರಾಜ್ಯ ಘಟಕದ ಮತ್ತೊಬ್ಬ ಉಪಾಧ್ಯಕ್ಷ ಜಿ.ಎಲ್.ಶರ್ಮಾ 250ಕ್ಕೂ ಹೆಚ್ಚು ಕಾರ್ಯಕರ್ತರ ಜತೆಗೆ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಎರಡೇ ದಿನಗಳಲ್ಲಿ ಯಾದವ್ ಕೂಡಾ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಶನಿವಾರ ಮಾಜಿ ಸಚಿವ ಬಚನ್ ಸಿಂಗ್ ಆರ್ಯ ಕೂಡಾ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಸಫಿಡಾನ್ ಕ್ಷೇತ್ರದಿಂದ ಜನನಾಯಕ ಜನತಾ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸಿ ಬಿಜೆಪಿಗೆ ಸೇರಿದ ಮುಖಂಡ ರಾಮ್ ಕುಮಾರ್ ಗೌತಮ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.