ನಟ ದರ್ಶನ್ ಬಳ್ಳಾರಿ ಜೈಲಿಗೆ; ಉಳಿದ ಆರೋಪಿಗಳ ಇತರೆಡೆಗೆ ಸ್ಥಳಾಂತರಿಸಲು ಕೋರ್ಟ್ ಅನುಮತಿ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಸೇರಿ ಹಲವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾದ ಆರೋಪ ಪ್ರಕರಣ ಬಯಲಾದ ಬೆನ್ನಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‍ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನಗರದ 24ನೆ ಎಸಿಎಂಎಂ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಲ್ಲಿರುವ ಆರೋಪಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಬೇಕೆಂದು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರು ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅವರ ಮನವಿ ಪುರಸ್ಕರಿಸಿರುವ ನ್ಯಾಯಾಧೀಶರು ನಟ ದರ್ಶನ್ ಸೇರಿ ಪ್ರಕರಣದ ಕೆಲ ಇತರೆ ಆರೋಪಿಗಳನ್ನು ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಅನುಮತಿ ನೀಡಿದ್ದಾರೆ.
ಈ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಬಳ್ಳಾರಿ ಜೈಲಿಗೆ, ಪ್ರದೂಶ್ ಬೆಳಗಾವಿ ಜೈಲಿಗೆ, ಪವನ್, ರಾಘವೇಂದ್ರ ಹಾಗೂ ನಂದೀಶ್ ಮೈಸೂರಿನ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ಧನರಾಜ್ ಧಾರವಾಡ ಜೈಲು, ವಿನಯ್ ವಿಜಯಪುರ ಜೈಲು, ನಾಗರಾಜ್‍ನನ್ನು ಕಲಬುರಗಿ ಜೈಲಿಗೆ ವರ್ಗಾಯಿಸಲಾಗಿದೆ. ಇನ್ನು ಮೊದಲನೇ ಆರೋಪಿ ಪವಿತ್ರಾಗೌಡ, ಅನುಕುಮಾರ್ ಹಾಗೂ ದೀಪಕ್‍ನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಸಲಾಗಿದೆ.
ಪ್ರಕರಣದಲ್ಲಿ ಒಟ್ಟು 17 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ರವಿ, ಕಾರ್ತಿಕ್, ನಿಖಿಲ್ ಹಾಗೂ ಕೇಶವಮೂರ್ತಿ ಎಂಬುವರು ಈಗಾಗಲೇ ತುಮಕೂರು ಜೈಲಿನಲ್ಲಿದ್ದಾರೆ.
‘ನಟ ದರ್ಶನ್ ಸ್ವಾತಂತ್ರ್ಯ ಹೋರಾಟಗಾರನಲ್ಲ. ಕೊಲೆ ಮಾಡಿ ಜೈಲು ಸೇರಿರುವ ಕ್ರಿಮಿನಲ್. ಆತನಿಗೆ ರಾಜೋಪಚಾರ ಮಾಡಬಾರದು’
-ಎಚ್.ವಿಶ್ವನಾಥ್, ಪರಿಷತ್ ಸದಸ್ಯ