ಕೋವಿಶೀಲ್ಡ್ ಬಳಿಕ, ಕೋವ್ಯಾಕ್ಸಿನ್ ಪಡೆದವರಲ್ಲೂ ಆರೋಗ್ಯ ಸಮಸ್ಯೆ ಎಂದ ವರದಿ!
ಬನಾರಸ್ ಹಿಂದೂ ವಿವಿಯ ಅಧ್ಯಯನ ವರದಿ | ಲಸಿಕೆ ಪಡೆದ ವರ್ಷದ ಬಳಿಕ ಶೇ.30ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ
PC : NDTV
ಹೊಸದಿಲ್ಲಿ: ಕೋವ್ಯಾಕ್ಸಿನ್ ಲಸಿಕೆ ಪಡೆದ ವರ್ಷದ ಬಳಿಕ ಶೇ.30 ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್ಯು) ನಡೆಸಿದ ಅಧ್ಯಯನದ ವರದಿ ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಅಡ್ಡ ಪರಿಣಾಮದ ಬಗ್ಗೆ ನಡೆಸಿದ ಅಧ್ಯಯನ ವರದಿಯು ಸ್ಟ್ರಿಂಜರ್ ನೇಚರ್ ಜರ್ನಲ್ನಲ್ಲಿ ಪ್ರಕಟವಾಗಿದೆ.
ಬ್ರಿಟನ್ ಮೂಲದ ಆಸ್ಟ್ರಝೆನೆಕಾ ಕಂಪೆನಿಯು, ಈ ಹಿಂದೆ ತಾನು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ, ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ಲೆಟ್ ಕಡಿಮೆಯಾಗುವಂತಹ ಅಡ್ಡ ಪರಿಣಾಮ ಉಂಟಾಗುವುದನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ, ಭಾರತದಲ್ಲಿ ಹೆಚ್ಚು ಜನರಿಗೆ ನೀಡಲಾದ ಕೋವ್ಯಾಕ್ಸಿನ್ ಲಸಿಕೆಯ ಅಡ್ಡ ಪರಿಣಾಮದ ಕುರಿತ ಅಧ್ಯಯನ ವರದಿಯೂ ಹೊರಬಿದ್ದಿದೆ.
ಕೋವ್ಯಾಕ್ಸಿನ್ ಅಡ್ಡ ಪರಿಣಾಮದ ಬಗ್ಗೆ ಅಧ್ಯಯನ ಮಾಡಲು 926 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಶೇ.50ರಷ್ಟು ಮಂದಿಯಲ್ಲಿ ಫಾಲೊ ಅಪ್ ಅವಧಿಯಲ್ಲಿ ಗಂಟಲು ಕೆರೆತ, ಮೂಗು ಸೋರುವಿಕೆ, ಕೆಮ್ಮು ಮುಂತಾದ ಲಕ್ಷಣ ಕಂಡುಬಂದಿವೆ ಎಂದು ಅಧ್ಯಯನ ವರದಿ ಹೇಳಿದೆ.
ಶೇ.1ರಷ್ಟು ಜನರು ಪಾರ್ಶ್ವವಾಯು, ಗುಲ್ಲೈನ್–ಬರ್ರೆ ಸಿಂಡ್ರೋಮ್ ಎಂಬ ನರಗಳಿಗೆ ಸಂಬಂಧಿತ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ.
‘ಲಸಿಕೆ ಪಡೆದ ಮೂರನೇ ಒಂದು ಭಾಗಷ್ಟು ಜನರಲ್ಲಿ ಅಡ್ವರ್ಸ್ ಇವೆಂಟ್ಸ್ ಆಫ್ ಸ್ಪೆಷಲ್ ಇಂಟರೆಸ್ಟ್(ಎಇಎಸ್ಐ) ಸಮಸ್ಯೆ ಕಂಡುಬಂದಿದೆ. ಚರ್ಮ ಸಂಬಂಧಿತ ಸಮಸ್ಯೆ, ನರಗಳಿಗೆ ಸಂಬಂಧಿತ ಅಸ್ವಸ್ಥತೆ, ಸಾಮಾನ್ಯ ಅಸ್ವಸ್ಥತೆ. ಈ ಮೂರೂ ಅಸ್ವಸ್ಥತೆಗಳು ಶೇ.30ರಷ್ಟು ಜನರಲ್ಲಿ ಕಂಡುಬಂದಿದೆ’ ಎಂದು 2022ರ ಜನವರಿಯಿಂದ 2023ರ ಆಗಸ್ಟ್ವರೆಗೆ ನಡೆಸಿದ ಅಧ್ಯಯನ ವರದಿ ಕಂಡುಕೊಂಡಿದೆ. ಈ ಅಧ್ಯಯನದಲ್ಲಿ ಭಾಗಿಯಾದವರಲ್ಲಿ 635 ಹದಿಹರೆಯದವರು ಮತ್ತು 291 ಮಂದಿ ವಯಸ್ಕರು ಎಂದು ತಿಳಿದು ಬಂದಿದೆ.