ಕೋವಿಡ್ ಪ್ರಕರಣ: ಒಂದು ವಾರದಲ್ಲಿ ಶೇ. 22ರಷ್ಟು ಹೆಚ್ಚಳ
Photo:freepik
ಹೊಸದಿಲ್ಲಿ: ದೇಶದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಶೇಕಡ 22ರಷ್ಟು ಹೆಚ್ಚಳ ಕಂಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 800ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ 800ಕ್ಕೂ ಹೆಚ್ಚು ಪ್ರಕರಣಗಳು ಒಂದು ದಿನದಲ್ಲಿ ವರದಿಯಾಗುತ್ತಿರುವುದು ಇದು ಏಳು ತಿಂಗಳಲ್ಲೇ ಮೊದಲು.
ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದು, ಏರಿಕೆ ಪ್ರಮಾಣ ಕೂಡಾ ನಿಧಾನ ಎಂದು ಅಂಕಿ ಅಂಶಗಳಿಂದ ಕಂಡುಬರುತ್ತಿದ್ದು, ತಪಾಸಣೆ ಕಡಿಮೆಯಾಗಿರುವುದು ಮತ್ತು ಜೆಎನ್.1 ಉಪಪ್ರಬೇಧದಲ್ಲಿ ರೋಗಲಕ್ಷಣಗಳು ಸೌಮ್ಯವಾಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕೇರಳದಲ್ಲಿ ಸೋಂಕಿನ ಪ್ರಮಾಣ ಈಗಾಗಲೇ ಗರಿಷ್ಠ ಪ್ರಮಾಣವನ್ನು ತಲುಪಿರಬೇಕು ಎಂದು ಅಂದಾಜಿಸಲಾಗಿದ್ದು, ಪ್ರಸಕ್ತ ಹಂತದಲ್ಲಿ ಗರಿಷ್ಠ ಸಂಖ್ಯೆಯನ್ನು ರಾಜ್ಯ ಈಗಾಗಲೇ ದಾಖಲಿಸಿದೆ.
ಡಿಸೆಂಬರ್ 24 ರಿಂದ 30ರವರೆಗಿನ ವಾರದಲ್ಲಿ ದೇಶದಲ್ಲಿ 4652 ಹೊಸ ಪ್ರಕರಣಗಳು ವರದಿಯಾಗಿದ್ದು, ಹಿಂದಿನ ಏಳು ದಿನಗಳಲ್ಲಿ ಈ ಪ್ರಮಾಣ 3818 ಆಗಿತ್ತು. ಒಂದು ವಾರದಲ್ಲಿ 29 ಮಂದಿ ಸೋಂಕಿತರು ಮೃತಪಟ್ಟಿದ್ದು, ಹಿಂದಿನ ವಾರ 17 ಮಂದಿ ಜೀವ ಕಳೆದುಕೊಂಡಿದ್ದರು. ಶನಿವಾರ ದೇಶದಲ್ಲಿ 841 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಮೇ 18ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಮೂರು ಮಂದಿ ಶನಿವಾರ ಸೋಂಕಿಗೆ ಬಲಿಯಾಗಿದ್ದಾರೆ.
ಗಮನಾರ್ಹವಾದ ವಿಚಾರವೆಂದರೆ ಕೇರಳದಲ್ಲಿ ಒಂದು ವಾರದಲ್ಲಿ 2282 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ವಾರ ವರದಿಯಾದ 3018 ಪ್ರಕರಣಗಳಿಗೆ ಹೋಲಿಸಿದರೆ ಇದು ಶೇಕಡ 24ರಷ್ಟು ಕಡಿಮೆ. ಇದು ಈಗಾಗಲೇ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಸಕ್ತ ಹಂತ ಗರಿಷ್ಠಮಟ್ಟವನ್ನು ತಲುಪಿದೆ ಎನ್ನುವುದರ ಸೂಚಕವಾಗಿದೆ. ಕಳೆದ ವಾರ ದೇಶದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇಕಡ 80ರಷ್ಟು ಪಾಲು ಹೊಂದಿದ್ದ ಕೇರಳದ ಪಾಲು ಈ ವಾರ ಶೇಕಡ 50ಕ್ಕೆ ಇಳಿದಿದೆ.