ಇಸ್ರೇಲ್ ಗಾಝಾದಲ್ಲಿ ಯುದ್ಧಾಪರಾಧಗಳನ್ನು ಎಸಗುತ್ತಿದೆ: ಇಸ್ರೇಲ್ ಮಾನವ ಹಕ್ಕುಗಳ ಗುಂಪಿನಿಂದ ಗಾಝಾ ಯುದ್ಧಾಪರಾಧಗಳ ಖಂಡನೆ
Photo : twitter/netanyahu
ಹೊಸದಿಲ್ಲಿ: ಇಸ್ರೇಲ್ ಗಾಝಾದಲ್ಲಿ ಯುದ್ಧಾಪರಾಧಗಳನ್ನು ಎಸಗುತ್ತಿದೆ ಎಂದು ಇಸ್ರೇಲಿ ಮಾನವ ಹಕ್ಕುಗಳ ಗುಂಪು B'Tselem ಆರೋಪಿಸಿದೆ. ಹಮಾಸ್ ದಾಳಿಗೆ ಮಿಲಿಟರಿ ಪ್ರತಿಕ್ರಿಯೆಯನ್ನು ಖಂಡಿಸಿರುವ ಗುಂಪು, ಅದನ್ನು ‘ಸೇಡು ತೀರಿಸಿಕೊಳ್ಳುವ ಕ್ರಿಮಿನಲ್ ನೀತಿ’ ಎಂದು ಬಣ್ಣಿಸಿದೆ. ಜೆರುಸಲೇಂ ಮೂಲದ ಲಾಭೋದ್ದೇಶವಿಲ್ಲದ ಈ ಸಂಸ್ಥೆಯು ಇಸ್ರೇಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಾಖಲಿಸಲು ಮತ್ತು ಇಸ್ರೇಲಿ ಆಕ್ರಮಣವನ್ನು ಅಂತ್ಯಗೊಳಿಸಲು ಶ್ರಮಿಸುತ್ತಿದೆ.
ಈಗಾಗಲೇ ನೂರಾರು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಗಗನಚುಂಬಿ ವಸತಿ ಸಂಕೀರ್ಣಗಳಿದ್ದಲ್ಲಿ ಅವುಗಳ ಅವಶೇಷಗಳಿವೆ. ಮನೆಗಳು ನಿವಾಸಿಗಳ ಮೇಲೆಯೇ ಕುಸಿದು ಬಿದ್ದಿವೆ ಎಂದು B'Tselem ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಶನಿವಾರ ಇಸ್ರೇಲ್ ಮೇಲೆ ಹಮಾಸ್ನ ಮಾರಣಾಂತಿಕ ದಾಳಿಗಳು ನಡೆದ ಬಳಿಕ ಇಸ್ರೇಲಿ ಅಧಿಕಾರಿಗಳು ಪ್ರಬಲ ಪ್ರತೀಕಾರದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ‘ಈಗಾಗಲೇ ಗಾಝಾ ಪಟ್ಟಿಯ ಮೇಲೆ ನೂರಾರು ಟನ್ ಬಾಂಬ್ಗಳನ್ನು ಹಾಕಲಾಗಿದೆ. ನಮಗೆ ಹಾನಿಯೇ ಮುಖ್ಯ ಹೊರತು ನಿಖರತೆಯಲ್ಲ ’ ಎಂದು ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್)ಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಮಂಗಳವಾರ ಹೇಳಿದ್ದರು.
ಇಸ್ರೇಲ್ನಲ್ಲಿ ಮೃತರು ಮತ್ತು ಗಾಯಾಳುಗಳ ಸಂಖ್ಯೆ ಬುಧವಾರ ಅನುಕ್ರಮವಾಗಿ 1,200 ಮತ್ತು 2.400ಕ್ಕೆ ಏರಿದೆ. ಫೆಲೆಸ್ತೀನ್ನಲ್ಲಿ 950 ಜನರು ಕೊಲ್ಲಲ್ಪಟ್ಟಿದ್ದು, 5,000 ಜನರು ಗಾಯಗೊಂಡಿದ್ದಾರೆ ಎಂದು ‘Haaretz’ ವೃತ್ತಪತ್ರಿಕೆಯು ವರದಿ ಮಾಡಿದೆ.
ನಿಖರತೆಗಿಂತ ಹಾನಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಹಗರಿಯವರ ಆದೇಶವನ್ನೂ ಪಾಲಿಸಲಾಗಿದೆ. 18,000ಕ್ಕೂ ಅಧಿಕ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ರಸ್ತೆಗಳು ಹಾಗೂ ಶಾಲೆಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಸಾರ್ವಜನಿಕ ಕಟ್ಟಡಗಳು ಹಾನಿಗೀಡಾಗಿವೆ ಎಂದು B'Tselem ಹೇಳಿದೆ.
ಫೆಲೆಸ್ತೀನ್ ನಿರಾಶ್ರಿತರಿಗಾಗಿ ವಿಸ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಏಜೆನ್ಸಿ (ಯುಎನ್ಆರ್ಡಬ್ಲ್ಯುಎ) ಪ್ರಕಾರ ಗಾಝಾದಲ್ಲಿ ಕೊಲ್ಲಲ್ಪಟ್ಟವರಲ್ಲಿ 290 ಮಕ್ಕಳು ಸೇರಿದ್ದಾರೆ. ಕನಿಷ್ಠ 13 ಕುಟುಂಬಗಳು ಸಂಪೂರ್ಣವಾಗಿ ನಾಶಗೊಂಡಿವೆ ಹಾಗೂ ಶೇ.60ರಷ್ಟು ಗಾಯಾಳುಗಳು ಮಕ್ಕಳು ಮತ್ತು ವಯಸ್ಸಾದ ವ್ಯಕ್ತಿಗಳಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯವು ತಿಳಿಸಿದೆ.
ಗಾಝಾ ಪಟ್ಟಿಯಾದ್ಯಂತ ತನ್ನ 22 ಆರೋಗ್ಯ ಕೇಂದ್ರಗಳ ಪೈಕಿ ಕೇವಲ 11 ಕೇಂದ್ರಗಳಿಗೆ ಮಾತ್ರ ಪ್ರಸ್ತುತ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿದೆ ಎಂದು ಬುಧವಾರ ಬಿಡುಗಡೆಗೊಳಿಸಿದ ಪರಿಸ್ಥಿತಿ ವರದಿಯಲ್ಲಿ ಯುಎನ್ಆರ್ಡಬ್ಲ್ಯುಎ ತಿಳಿಸಿದೆ.
ಆಸ್ಪತ್ರೆಗಳು ಭಾಗಶಃ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಬಾಂಬ್ ದಾಳಿಯಿಂದ ಹಾನಿಗೀಡಾಗಿವೆ ಮತ್ತು ಎಲ್ಲ ಆಸ್ಪತ್ರೆಗಳು ವೈದ್ಯಕೀಯ ಉಪಕರಣಗಳು ಮತ್ತು ವಿದ್ಯುತ್ ಜನರೇಟರ್ಗಳಿಗೆ ಇಂಧನ ಕೊರತೆಯನ್ನು ಎದುರಿಸುತ್ತಿವೆ ಎಂದು B'Tselem ಹೇಳಿದೆ.
ನೆತನ್ಯಾಹು ‘ತಮಾಷೆ’
‘ತಕ್ಷಣವೇ ಜಾಗ ಖಾಲಿ ಮಾಡಿ ’ಎಂದು ಗಾಝಾ ನಿವಾಸಿಗಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಆದೇಶವನ್ನು ‘ವಾಸ್ತವತೆಯ ಮೇಲೆ ಪರಿಣಾಮ ಬೀರದ ತಮಾಷೆ ’ಎಂದು ಬಣ್ಣಿಸಿರುವ B'Tselem, ಗಾಜಾ ಪಟ್ಟಿಯನ್ನು ಎಲ್ಲ ಕಡೆಗಳಿಂದಲೂ ಮುಚ್ಚಲಾಗಿದೆ ಮತ್ತು ಅಲ್ಲಿಯ ನಿವಾಸಿಗಳಿಗೆ ಹೊರಹೋಗಲು ಯಾವುದೇ ಮಾರ್ಗವಿಲ್ಲ. ಅಲ್ಲಿ ಯಾವುದೇ ಆಶ್ರಯಗಳು ಉಳಿದಿಲ್ಲ ಮತ್ತು ಬಾಂಬ್ ದಾಳಿಗಳಿಂದ ರಕ್ಷಣೆ ಪಡೆಯಲು ದಾರಿಯೇ ಇಲ್ಲ ಎಂದು ಹೇಳಿದೆ.
ಗಾಝಾ ಪಟ್ಟಿಯನ್ನು ಹಮಾಸ್ ಹೋರಾಟಗಾರರು ಆಳುತ್ತಿದ್ದರೆ, ಇಸ್ರೇಲ್ 2007ರಿಂದಲೂ ಗಾಝಾಕ್ಕೆ ಭೂಮಿ,ವಾಯು ಮತ್ತು ಜಲಮಾರ್ಗಗಳನ್ನು ನಿರ್ಬಂಧಿಸಿದೆ. ಈಜಿಪ್ಟ್ ಕೂಡ ಇದನ್ನು ಜಾರಿಗೊಳಿಸಿದ್ದು,20 ಲಕ್ಷಕ್ಕೂ ಅಧಿಕ ಫೆಲೆಸ್ತೀನಿಗಳು ತಮ್ಮ ಪ್ರದೇಶದಲ್ಲಿ ದಿಗ್ಬಂಧನದಲ್ಲಿದ್ದಾರೆ.
ಇಸ್ರೇಲಿ ಸಚಿವರು ಹೇಳುತ್ತಿರುವುದಕ್ಕೆ ವಿರುದ್ಧವಾಗಿ ಈ ನೀತಿಯು ಹೊಸದೇನಲ್ಲ, ಆದರೆ ಹಲವಾರು ವರ್ಷಗಳಿಂದಲೂ ಗಾಝಾದ ಮೇಲೆ ಹೇರಲಾಗಿದೆ. ಅದು ಉಂಟು ಮಾಡಿರುವ ಸಾವುಗಳು,ವಿನಾಶ,ನೋವು ಮತ್ತು ಭಯಾನಕತೆ ಏನನ್ನೂ ಸಾಧಿಸಿಲ್ಲ, ಬದಲಿಗೆ ಇನ್ನಷ್ಟು ಭಯಾನಕತೆಗೆ ಕಾರಣವಾಗಿದೆ. ಗಾಜಾಕ್ಕೆ ಸಂಪೂರ್ಣ ಮುತ್ತಿಗೆ ಹಾಕಿರುವ ಇಸ್ರೇಲ್ ವಿದ್ಯುತ್ ಸಂಪರ್ಕವನ್ನು ತಪ್ಪಿಸಿದೆ. ಹೀಗಾಗಿ ಸ್ಥಳಿಯರು ಸ್ಥಳೀಯ ಸಣ್ಣ ವಿದ್ಯುತ್ ಸ್ಥಾವರಗಳನ್ನು ಅವಲಂಬಿಸಿದ್ದು,ಅವುಗಳಲ್ಲಿ ಕೆಲವೇ ದಿನಗಳಲ್ಲಿ ಇಂಧನ ಖಾಲಿಯಾಗಲಿದೆ. ಅಲ್ಲಿ ನೀರಿನದೂ ಕೊರತೆಯಿದೆ. ಗಾಜಾದಲ್ಲಿ ಲಭ್ಯ ನೀರನ್ನು ಶುದ್ಧಗೊಳಿಸದೆ ಬಳಸಲು ಸಾಧ್ಯವಿಲ್ಲ ಮತ್ತು ಅದಕ್ಕೂ ವಿದ್ಯುತ್ತಿನ ಅಗತ್ಯವಿದೆ. ಎಲ್ಲ ಕ್ರಾಸಿಂಗ್ಗಳನ್ನು ಮುಚ್ಚಲಾಗಿದ್ದು,ಸರಕುಗಳ ಸಾಗಣೆಯೂ ಸಾಧ್ಯವಿಲ್ಲ ಎಂದು B'Tselem ಹೇಳಿದೆ.
ಈ ಕ್ರಮಗಳಿಗೆ ಯಾವುದೇ ಸಮರ್ಥನೆಯಿಲ್ಲ ಮತ್ತು ಇವು ಉನ್ನತ ಇಸ್ರೇಲಿ ಅಧಿಕಾರಿಗಳು ಆದೇಶಿಸಿರುವ ಯುದ್ಧಾಪರಾಧಗಳಾಗಿವೆ. ಭಯೋತ್ಪಾದನೆಯಿದ್ದರೂ ಎಂದೂ ಉದ್ದೇಶಪೂರ್ವಕವಾಗಿ ನಾಗರಿಕರು,ಅವರ ಆಸ್ತಿಪಾಸ್ತಿಗಳು ಮತ್ತು ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯನ್ನುಂಟು ಮಾಡುವಂತಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.