ಹರಿಯಾಣ | ಎಕ್ಸ್ ನಲ್ಲಿ ‘ಮೋದಿ ಪರಿವಾರ’ ಎಂದು ಬರೆದುಕೊಂಡಿದ್ದಕ್ಕೆ ಟೀಕಿಸಿದವರಿಗೆ ಮಾಜಿ ಸಚಿವ ಅನಿಲ್ ವಿಜ್ ರಿಂದ ವಾಗ್ದಾಳಿ
Photo: ANI
ಹೊಸ ದಿಲ್ಲಿ: ಎಕ್ಸ್ ಸಾಮಾಜಿಕ ಮಾಧ್ಯಮದ ತಮ್ಮ ಸ್ವವಿವರದಲ್ಲಿ ‘ಮೋದಿಯ ಪರಿವಾರ’ ಎಂಬ ಸಾಲನ್ನು ತಮ್ಮ ಹೆಸರಿನ ಕೆಳಗೆ ಸೇರಿಸಿದ್ದಕ್ಕೆ ತಮ್ಮ ವಿರುದ್ಧ ದಾಳಿ ನಡೆಸಿದ ಬಿಜೆಪಿ ನಾಯಕರು ಹಾಗೂ ಬೆಂಬಲಿಗರಿಂದ ವಿರುದ್ಧ ಮಾಜಿ ಹರ್ಯಾಣ ಸಚಿವ ಅನಿಲ್ ವಿಜ್ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅನಿಲ್ ವಿಜ್, ತನ್ನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವವವರು ಅಸಹ್ಯಕರ ಆಟವಾಡುತ್ತಿದ್ದಾರೆ. ನನ್ನ ವಿರುದ್ಧ ಸಾರ್ವಜನಿಕ ದಾಳಿಯನ್ನು ತೀವ್ರಗೊಳಿಸುವುದಕ್ಕೂ ಮುನ್ನ ನನಗೆ ಸ್ಪಷ್ಟೀಕರಣ ನೀಡಲು ಅವಕಾಶ ನೀಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ.
ಬಿಜೆಪಿ ನಾಯಕರು ‘ಮೋದಿ ಪರಿವಾರ’ ಎಂಬ ಅಭಿಯಾನವನ್ನು ಪ್ರಾರಂಭಿಸಿದಾಗ, ಬಹುತೇಕ ನಾಯಕರು ತನ್ನ ಹೆಸರಿನ ನಂತರ ಆವರಣ ಚಿಹ್ನೆಯೊಳಗೆ ‘ಮೋದಿಯ ಪರಿವಾರ’ ಎಂಬ ಸಾಲನ್ನು ಸೇರಿಸಿಕೊಂಡಿದ್ದರು. ಅದೇ ರೀತಿ ಅನಿಲ್ ವಿಜ್ ಕೂಡಾ ಮಾಡಿದ್ದರು. ಆದರೆ, ತಮ್ಮನ್ನು ಹರ್ಯಾಣ ಸಚಿವ ಸಂಪುಟದಿಂದ ಕೈಬಿಟ್ಟ ನಂತರ ತಮ್ಮ ಎಕ್ಸ್ ಸ್ವವಿವರವನ್ನು ಮಾರ್ಪಡಿಸಿದ್ದ ವಿಜ್, “ಅನಿಲ್ ವಿಜ್-ಮಾಜಿ ಹರ್ಯಾಣ ಗೃಹ ಸಚಿವ, ಭಾರತ” ಎಂದು ಹಾಕಿಕೊಂಡಿದ್ದರು. ಅದರ ನಂತರದ ಸಾಲಿನಲ್ಲಿ “ಹರ್ಯಾಣ ಮಾಜಿ ಗೃಹ ಮತ್ತು ಆರೋಗ್ಯ ಸಚಿವ, ಭಾರತ” ಎಂದು ಬರೆದುಕೊಂಡು, ಅದರ ಪಕ್ಕದ ಆವರಣ ಚಿಹ್ನೆಯೊಳಗೆ “ಮೋದಿಯ ಪರಿವಾರ’ದ ಸಾಲನ್ನು ಸೇರಿಸಿದ್ದರು. ಈ ಬದಲಾವಣೆಯನ್ನು ಗಮನಿಸಿದ ಹಲವರು, ಇದು ಅನಿಲ್ ವಿಜ್ ಅವರ ಸಿಟ್ಟು ಮತ್ತು ಬಂಡುಕೋರತನದ ಚಿಹ್ನೆ ಎಂದು ವ್ಯಾಖ್ಯಾನಿಸಿದ್ದರು.
“ನಾನು ಮಾಜಿಯಾಗಿರುವುದು ಎಲ್ಲರಿಗೂ ತಿಳಿದಿದೆ ಹಾಗೂ ಈಗ ನಾನು ಮಾಜಿ ಎಂದು ಎಲ್ಲ ಕಡೆಯೂ ಬರೆಯಬೇಕಿದೆ” ಎಂದು ವಿಜ್ ತಮ್ಮ ಪೋಸ್ಟ್ ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಮುಂದುವರಿದು, “ನಾನು ನನ್ನ ಎಕ್ಸ್ ಖಾತೆಯಲ್ಲಿ ನನ್ನ ಸ್ವವಿವರವನ್ನು ಬರೆಯುವಾಗ ಹೆಸರಿನಲ್ಲಿ ಬಳಸಲಾದ ಅಕ್ಷರಗಳು ನಿಗದಿಪಡಿಸಿದ್ದ ಮಿತಿಯನ್ನು ಮೀರಿದವು. ಹೀಗಾಗಿ ‘ಮೋದಿಯ ಪರಿವಾರ’ ಎಂಬ ಸಾಲನ್ನು ಮೇಲಿನ ಸಾಲಿನಿಂದ ತೆಗೆದು ಕೆಳಗಿನ ಸಾಲಿನಲ್ಲಿ ಬಳಸಬೇಕಾಯಿತು. ಇದರಿಂದ ಕೆಲವು ಜನರಿಗೆ ಅಸಹ್ಯಕರ ಆಟವಾಡಲು ಅವಕಾಶ ದೊರೆಯಿತು” ಎಂದು ಬರೆದುಕೊಂಡಿದ್ದಾರೆ.
“ಈಗಲೇ ಇದನ್ನು ಬಗೆಹರಿಸಿ. ನಾನು ಬಿಜೆಪಿಯ ಕಡು ಭಕ್ತನಾಗಿದ್ದೇನೆ. ಈ ಆಟವನ್ನು ಆಡುವುದಕ್ಕೂ ಮುನ್ನ ನೀವು ನನ್ನೊಂದಿಗೆ ಮಾತನಾಡಿದ್ದರೆ, ನಿಮಗೆ ಸ್ಪಷ್ಟೀಕರಣ ಕೇಳಿಸಿಕೊಳ್ಳುವ ಅವಕಾಶ ದೊರೆಯುತ್ತಿತ್ತು ಹಾಗೂ ಇದು ನಡೆಯುತ್ತಿರಲಿಲ್ಲ” ಎಂದೂ ಅವರು ಹೇಳಿದ್ದಾರೆ.