ಉದಾರವಾದಿಗಳು ಭಯೋತ್ಪಾದಕರಿಗಿಂತ ಕಡಿಮೆಯಿಲ್ಲ ಎಂದು ʼದಿ ಹಿಂದೂ ಪತ್ರಿಕೆʼಯನ್ನು ಟೀಕಿಸಿದ ಸಿ ಟಿ ರವಿ
ಚೆನ್ನೈ ಮಳೆ ಅನಾಹುತ ನಿಭಾಯಿಸುವಲ್ಲಿ ಡಿಎಂಕೆ ವೈಫಲ್ಯವನ್ನು ಪತ್ರಿಕೆ ಮುಚ್ಚಿ ಹಾಕುತ್ತಿದೆ ಎಂದು ಆರೋಪ
ಸಿ ಟಿ ರವಿ | Photo: PTI
ಚೆನ್ನೈ : ಮಿಚಾಂಗ್ ಚಂಡ ಮಾರುತದಿಂದ ತತ್ತರಿಸಿರುವ ತಮಿಳುನಾಡಿಗೆ ಸಾಕಷ್ಟು ಹಾನಿಯಾಗಿದೆ. ವಿಶೇಷವಾಗಿ ಮಿಚಾಂಗ್ ಪರಿಣಾಮ ಸುರಿದ ಮಳೆಗೆ ಚೆನ್ನೈ ನಗರ ಮುಳುಗಿತ್ತು. ವಿಮಾನಯಾನ ಸಂಚಾರಕ್ಕೂ ತೊಡಕಾಗಿತ್ತು. ಮಳೆ ಮತ್ತು ಅದರ ಪರಿಣಾಮದ ಘಟನೆಗಳಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರು. ಈ ಬಗ್ಗೆ ಹಿಂದೂ ಪತ್ರಿಕೆಯಲ್ಲಿ ಪೆರುಂಬಾಕಂನಲ್ಲಿನ ಆಸ್ಪತ್ರೆಯಿಂದ ರೋಗಿಗಳನ್ನು ಕಸದ ವಾಹನದಲ್ಲಿ ರಕ್ಷಣೆ ಮಾಡುತ್ತಿರುವ ಚಿತ್ರ ಪ್ರಕಟವಾಗಿತ್ತು.
ಈ ಬಗ್ಗೆ @sumanthraman ಎಂಬ X ಬಳಕೆದಾರರು “ಚೆನ್ನೈನಲ್ಲಿ ಇಂದಿನ ʼದಿ ಹಿಂದೂʼ ವಿನ ಮುಖಪುಟ. ಏನಿದು #ಚೆನ್ನೈಪ್ರವಾಹ?” ಎಂದು ಮೊದಲು ಟ್ವೀಟ್ ಮಾಡಿದ್ದರು. ಬಳಿಕ ಬಿಜೆಪಿ ನಾಯಕ ಸಿ ಟಿ ರವಿ ಮರು ಟ್ವೀಟ್ ಮಾಡಿ, “ಲಿಬರಲ್ ಇಕೋಸಿಸ್ಟಮ್ ತನ್ನ ಪೇ ಮಾಸ್ಟರ್ಗಳ ರಕ್ಷಣೆಗೆ ಹೇಗೆ ಬರುತ್ತದೆ! ಚರಂಡಿಗಳಿಗೆ ಸಾವಿರಾರು ಕೋಟಿ ಖರ್ಚು ಮಾಡಿದರೂ ಚೆನ್ನೈ ಮಳೆಯನ್ನು ನಿಭಾಯಿಸುವಲ್ಲಿ ದಯನೀಯವಾಗಿ ವಿಫಲವಾದ ಡಿಎಂಕೆ ಸರ್ಕಾರದ ಭ್ರಷ್ಟಾಚಾರ ಮತ್ತು ಅದಕ್ಷತೆಯನ್ನು ಅವರು ಸಂಪೂರ್ಣವಾಗಿ ಮರೆ ಮಾಚುತ್ತಾರೆ. ಅದೃಷ್ಟವಶಾತ್ ಈ ಕೀಳುಮಟ್ಟದವರು ಚೆನ್ನೈನಲ್ಲಿನ ಸಮಸ್ಯೆಗೆ ಕೇಂದ್ರ ಸರ್ಕಾರವನ್ನು ಇನ್ನೂ ದೂರಿಲ್ಲ. ಉದಾರವಾದಿಗಳು ಭಯೋತ್ಪಾದಕರಿಗಿಂತ ಕಡಿಮೆಯಿಲ್ಲ!” ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ನಲ್ಲಿ ಅವರು ಎಲ್ಲಿಯೂ ʼಹಿಂದೂ ಪತ್ರಿಕೆʼಯನ್ನು ನೇರವಾಗಿ ದೂಷಿಸಿಲ್ಲ. ಆದರೆ ಪರೋಕ್ಷವಾಗಿ ಸರಕಾರದ ಒಡಕುಗಳನ್ನು, ಹಿನ್ನಡೆಗಳನ್ನು ಪತ್ರಿಕೆ ಪ್ರಕಟಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.