ಮಣಿಪುರ: 30 ಸಾವಿರ ಮಂದಿಯ ಗುಂಪಿನಿಂದ ಕರ್ಫ್ಯೂ ಉಲ್ಲಂಘನೆ
ಗುವಾಹತಿ: ಹಲವು ತಿಂಗಳಿಂದ ಜನಾಂಗೀಯ ಸಂಘರ್ಷದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಬುಧವಾರ ಕಣಿವೆ ಪ್ರದೇಶದ ಸಂಘಟನೆಗಳ ನೇತೃತ್ವದಲ್ಲಿ ಕರ್ಫ್ಯೂ ಉಲ್ಲಂಘಿಸಿ ಸಮಾವೇಶಗೊಂಡ 30 ಸಾವಿರ ಮಂದಿಯ ದೊಡ್ಡ ಗುಂಪನ್ನು ತಡೆಯಲು ಭದ್ರತಾ ಪಡೆಗಳು ಪ್ರಯತ್ನ ನಡೆಸಿದ್ದು, ಈ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಕನಿಷ್ಠ 28 ಮಂದಿ ಗಾಯಗೊಂಡಿದ್ದಾರೆ.
ಕರ್ಫ್ಯೂ ಉಲ್ಲಂಘಿಸಿದ ಕಾರ್ಯಕರ್ತರು ಚುರಚಂದನಪುರ, ಬಿಷ್ಣುಪುರ ಗಡಿಯಲ್ಲಿ ಸೇನೆಯ ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಿ ಕುಕಿಗಳು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮೀಟಿ ಮನೆಗಳನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡಿದರು.
ಪುಂಗ್ಕೊ- ಇಖಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಾಜಕ ವಾತಾವರಣ ಸೃಷ್ಟಿಯಾಗಿದ್ದು, ಗಡಿಯಲ್ಲಿ ಸ್ಥಳಾಂತರಗೊಂಡ ಕುಟುಂಬಗಳು ತಮ್ಮ ಗ್ರಾಮ ಹಾಗು ಮನೆಗಳನ್ನು ಮರು ಸ್ವಾಧೀನಕ್ಕೆ ಪಡೆಯುವ ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಸೇನಾ ಬ್ಯಾರಿಕೇಡ್ ನ ಮುಂಭಾಗದಲ್ಲಿ ಎರಡು ಸ್ತರಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು 200ಕ್ಕೂ ಅಧಿಕ ಅಶ್ರುವಾಯು ಸೆಲ್ಗಳನ್ನು ಪ್ರಯೋಗಿಸಲಾಯಿತು. ಸಾವಿರಾರು ಮಂದಿಯನ್ನು ಚದುರಿಸುವುದು ಸಂಜೆಯ ವರೆಗೂ ಅಸಾಧ್ಯವಾಗಿತ್ತು. ಈ ಸಂಘರ್ಷದ ವೇಳೆ ಗಾಯಗೊಂಡವರಲ್ಲಿ ಇಬ್ಬರು ಆರ್ ಎಎಫ್ ಸಿಬ್ಬಂದಿ ಕೂಡಾ ಸೇರಿದ್ದಾರೆ ಎಂದು ಮೂಲಗಳು ಹೇಳಿವೆ.
ಚುರಚಂದಾಪುರ ಜಿಲ್ಲೆಯ ತೊರಬಂಗ್ ಪ್ರದೇಶದಲ್ಲಿ ತಮ್ಮ ಮನೆಗಳಿಗೆ ತೆರಳುವ ಸಲುವಾಗಿ ಸೇನಾ ಬ್ಯಾರಿಕೇಡ್ ಗಳನ್ನು ತೆರವು ಮಾಡಲು ಸಾಮೂಹಿಕ ಚಳವಳಿಗೆ ಕೋ ಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ ಇಂಟೆಗ್ರಿಟಿ ಸಂಘಟನೆ ನೀಡಿದ ಕರೆಯ ಅನ್ವಯ ಬೆಳಿಗ್ಗೆ 10.30ರ ಸುಮಾರಿಗೆ ಬಿಷ್ಣುಪುರದ ಕ್ವಾಕ್ಟಾ ಪ್ರದೇಶದಲ್ಲಿ ಜನ ಜಮಾಯಿಸಿದ್ದರು.