ಅಪ್ಪಳಿಸಿದ ಫಂಗಲ್ ಚಂಡಮಾರುತ | ‘ದಾಖಲೆ’ ಮಳೆಗೆ ತಮಿಳುನಾಡು, ಪುದುಚೇರಿ ತತ್ತರ
► ವಿಲ್ಲುಪುರಂನಲ್ಲಿ 504 ಮಿ.ಮೀ. ; ಪುದುಚೇರಿಯಲ್ಲಿ 490 ಮಿ.ಮೀ. ಮಳೆ ► ಚೆನ್ನೈನಲ್ಲಿ ಮೂವರು ಮೃತ್ಯು ; ವಸತಿ ಪ್ರದೇಶಗಳು ಜಲಾವೃತ
PC : PTI
ಚೆನ್ನೈ : ಶನಿವಾರ ತಡರಾತ್ರಿ ಅಪ್ಪಳಿಸಿದ ‘ಫಂಗಲ್ ಚಂಡಮಾರುತ’ ಪರಿಣಾಮವಾಗಿ ಪುದುಚೇರಿ ಹಾಗೂ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲೂ ದಾಖಲೆ ಪ್ರಮಾಣದ ಮಳೆಯಾಗಿದೆ.
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೈಲಂ (ವಿಲ್ಲುಪುರಂ) ಹಾಗೂ ಪುದುಚೇರಿಯಲ್ಲಿ ರವಿವಾರ ಬೆಳಗ್ಗೆ 7.15ರವರೆಗೆ ಕ್ರಮವಾಗಿ 504 ಮಿ.ಮೀ. ಹಾಗೂ 490 ಮಿ.ಮೀ.ಮಳೆಯಾಗಿರುವುದನ್ನು ಸ್ವಯಂಚಾಲಿತ ಹವಾಮಾನ ಕೇಂದ್ರಗಳು ದಾಖಲಿಸಿವೆ.
ಚೆನ್ನೈನಲ್ಲಿಯೂ ಶುಕ್ರವಾರ ಸಂಜೆಯಿಂದ ರವಿವಾರ ಬೆಳಗ್ಗೆ ಸಂಜೆ 8.30ರವರೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 48.4 ಸೆಂ.ಮೀ. ಮಳೆಯಾಗಿದೆ.
ಪುದುಚೇರಿಯಲ್ಲಿ ಈವರೆಗೆ ಸುರಿದ ಗರಿಷ್ಠ ಪ್ರಮಾಣದ ಮಳೆ ಇದಾಗಿದೆ. 2004ರ ಆಕ್ಟೋಬರ್ 31ರಂದು ಪುದುಚೇರಿಯಲ್ಲಿ 21 ಸೆಂ.ಮೀ. ಮಳೆಯಾಗಿರುವುದು ಈವರೆಗಿನ ಗರಿಷ್ಠ ದಾಖಲೆಯಾಗಿತ್ತು. ಚೆನ್ನೈನಲ್ಲಿ ಭಾರೀ ಪ್ರವಾಹವನ್ನು ಸೃಷ್ಟಿಸಿ, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ 2015ರ ಪ್ರವಾಹದ ಸಂದರ್ಭಕ್ಕಿಂತಲೂ ಈಸಲ ಅಧಿಕ ಮಳೆ ಸುರಿದಿದೆ.
ಶನಿವಾರ ರಾತ್ರಿ ಪುದುಚೇರಿ ಸಮೀಪದಲ್ಲಿರುವ ಕಾರೈಕಲ್ ಹಾಗೂ ಮಹಾಬಲಿಪುರಂ ನಡುವೆ ‘ಫಂಗಲ್’ ಚಂಡಮಾರುತವು ಅಪ್ಪಳಿಸಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ ಉತ್ತರ ಕರಾವಳಿಯುದ್ದಕ್ಕೂ ಧಾರಾಕಾರ ಮಳೆಯಾಗಿದೆ.
PC : PTI
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪುದುಚೇರಿಯ ಹೊರವಲಯದಲ್ಲಿರುವ ಎಲ್ಲಾ ವಸತಿ ಪ್ರದೇಶಗಳು ಜಲಾವೃತಗೊಂಡವು. ಗಾಳಿಯ ಹೊಡೆತದಿದಾಗಿ ವಿವಿಧೆಡೆ ಹಲವಾರು ಮರಗಳು ಧರಾಶಾಯಿಯಾಗಿವೆ. ಶನಿವಾರದಿಂದೀಚೆಗೆ ಪಾಂಡಿಚೇರಿಯ ಬಹುತೇಕ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ನಗರದ ಎಲ್ಲಾ ಅಂಗಡಿ, ಮುಂಗಟ್ಚೆಗಳನ್ನು ಮುಚ್ಚಲಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕಳೆದ ಮೂರು ದಶಕಗಳಲ್ಲೇ ಪಾಂಡಿಚೇರಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿರುವುದನ್ನು ತಾವು ಕಂಡಿಲ್ಲವೆಂದು ಹಲವಾರು ಸ್ಥಳೀಯ ಹಿರಿಯ ನಾಗರಿಕರು ಹೇಳಿಕೊಂಡಿದ್ದಾರೆ.
ಅನೇಕ ವಸತಿ ಪ್ರದೇಶಗಳು ಜಲಾವೃತಗೊಂಡಿದೆ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹಲವಾರು ಕಾರು, ದ್ವಿಚಕ್ರವಾಹನಗಳು ನೆರೆನೀರಿನಲ್ಲಿ ಮುಳುಗಿವೆ. ತಮಿಳುನಾಡಿನ ಹಲವೆಡೆ ಭಾರೀ ಮಳೆಯಿಂದಾಗಿ ಬೆಳೆಗಳಿಗೆ ಹಾನಿಯಾಗಿದೆ. ಚಂಡಮಾರುತ ಭೀತಿಯ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಿಂದ ತೆರವುಗೊಳಿಸಲಾದವರಿಗಾಗಿ ಸರಕಾರವು ಪರಿಹಾರ ಕೇಂದ್ರಗಳನ್ನು ತೆರೆದಿದೆ.
ವಿಲ್ಲುಪುರಂ, ಕಡಲೂರ್, ಕಲ್ಲಕುರಿಚಿ, ತಿರುವನ್ನಮಲೆ ಹಾಗೂ ಪುದುಚೇರಿಯಲ್ಲಿ ರವಿವಾರವೂ ಭಾರೀ ಮಳೆ ಸುರಿದಿದೆ.
ಚೆನ್ನೈ, ವಿಲ್ಲುಪುರಂ ಸೇರಿದಂತೆ ನೆರೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಗ್ಗುಪ್ರದೇಶಗಳಲ್ಲಿ ವಾಸವಾಗಿರುವ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯ ಆಡಳಿತ, ಪೊಲೀಸ್ ಪಡೆಗಳು, ಸೇನೆ ಹಾಗೂ ವಿಶೇಷ ರಕ್ಷಣಾ ತಂಡಗಳ ಸಮನ್ವಯ ಪ್ರಯತ್ನದಿಂದಾಗಿ ಈ ಕಾರ್ಯಾಚರಣೆಗಳನ್ನು ಆಯೋಜಿಸಲಾಗಿದೆ.
PC : PTI
ಕೊರಟ್ಟೂರು, ಕೊಯಂಬೇಡು, ವಿರುಗಾಂಬಕ್ಕಂ, ನಾಗಂಬಾಕಂ ಹಾಗೂ ಅಲ್ವಾರ್ಪೇಟ್ ಸೇರಿದಂತೆ ಮಧ್ಯ ಚೆನ್ನೈನ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ.
ತೀವ್ರವಾದ ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈ ವಿಮಾನನಿಲ್ದಾಣ ಮುಚ್ಚಲಾಗಿದ್ದು 226 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ ಹಾಗೂ 20 ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಲ್ಲಿ ಇಳಿಯುವಂತೆ ಮಾಡಲಾಗಿದೆ.
ಭಾರೀ ಮಳೆಗಾಳಿಯ ಹಿನ್ನೆಲೆಯಲ್ಲಿ ಚೆನ್ನೈ ಬೀಚ್ ಹಾಗೂ ವೆಲೆಚಾರಿ ನಡುವಿನ ಉಪನಗರ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಲ್ಲಾವರಂನಲ್ಲಿ ಚೆನ್ನೈ ಬೀಚ್ ಹಾಗೂ ಚೆಂಗಲ್ಪೇಟ್ ನಡುವಿನ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.
PC : PTI