ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿವಸ್ತ್ರಗೊಳಿಸಿ ಮೈಮೇಲೆ ಮೂತ್ರ ವಿಸರ್ಜನೆ; ಮನನೊಂದು ದಲಿತ ಬಾಲಕ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಉತ್ತರಪ್ರದೇಶ: ದಲಿತ ಬಾಲಕನೋರ್ವನನ್ನು ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಲ್ಲದೆ ಆತನ ಮೈಮೇಲೆ ಮೂತ್ರ ವಿಸರ್ಜನೆ ಮಾಡಿ ಅವಮಾನಿಸಲಾಗಿದ್ದು, ಇದರಿಂದ ಮನನೊಂದು ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಬಸ್ತಿಯಲ್ಲಿ ನಡೆದಿದೆ.
ಆದಿತ್ಯ(17) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆದಿತ್ಯನನ್ನು ಡಿಸೆಂಬರ್ 20ರಂದು ಸ್ಥಳೀಯರೊಬ್ಬರು ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದರು. ಪಾರ್ಟಿಯಲ್ಲಿ ನಾಲ್ವರು ಆತನನ್ನು ವಿವಸ್ತ್ರಗೊಳಿಸಿ ಕ್ರೂರವಾಗಿ ಥಳಿಸಿದ್ದಾರೆ. ಬಳಿಕ ಮೈ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಬಾಲಕನ ಚಿಕ್ಕಪ್ಪ ವಿಜಯ್ ಕುಮಾರ್ ಈ ಕುರಿತು ಮಾತನಾಡಿದ್ದು,ಡಿಸೆಂಬರ್ 20ರಂದು ಘಟನೆ ಸಂಭವಿಸಿದೆ, ಆದರೆ ಮರುದಿನ ನಮಗೆ ವಿಷಯ ತಿಳಿಯಿತು. ಆದಿತ್ಯ ತಡರಾತ್ರಿ ಮನೆಗೆ ಬಂದು ಮರುದಿನ ಬೆಳಿಗ್ಗೆ ಘಟನೆ ಬಗ್ಗೆ ನಮಗೆ ವಿವರಿಸಿದ್ದಾನೆ. ಆದಿತ್ಯನನ್ನು ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿ ಅಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ, ವಿವಸ್ತ್ರಗೊಳಿಸಿ ಥಳಿಸಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಕೃತ್ಯ ಪೂರ್ವ ನಿಯೋಜಿತವೋ ಎಂದು ಗೊತ್ತಿಲ್ಲ. ನಾವು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಮೊದಲು ದೂರು ದಾಖಲಿಸಿಕೊಂಡಿಲ್ಲ. ಇದರಿಂದ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸರ್ಕಲ್ ಆಫೀಸರ್ ಪ್ರದೀಪ್ ಕುಮಾರ್ ತ್ರಿಪಾಠಿ, ಆದಿತ್ಯ ಎಂಬ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕಪ್ತಂಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.