ಮೇಕೆ ಕದ್ದ ಆರೋಪದಲ್ಲಿ ದಲಿತ ವ್ಯಕ್ತಿ, ಕುರಿಗಾಹಿ ಯುವಕನನ್ನು ತಲೆಕೆಳಕಾಗಿ ನೇತುಹಾಕಿ ಹಲ್ಲೆ: ಆರೋಪಿಗಳ ಬಂಧನ
Photo credit: Twitter/@KP_Aashish
ಮಂಚೇರಿಯಾಲ್ (ತೆಲಂಗಾಣ): ಮೇಕೆ ಗುಂಪಿನಿಂದ ಮೇಕೆಯೊಂದನ್ನು ಕಳವು ಮಾಡಲಾಗಿದೆ ಎಂಬ ಶಂಕೆಯಲ್ಲಿ ಓರ್ವ ದಲಿತ ವ್ಯಕ್ತಿ ಹಾಗೂ ಮತ್ತೊಬ್ಬ ಯುವಕನನ್ನು ತಲೆ ಕೆಳಕಾಗಿ ನೇತು ಹಾಕಿ, ಅವರಿಗೆ ಹೊಗೆ ಕುಡಿಸಿ ಥಳಿಸಿರುವ ಅಮಾನವೀಯ ಘಟನೆ ಮಂದಮಾರಿ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬೆಲ್ಲಂಪಲ್ಲಿ ಠಾಣೆಯ ಪೊಲೀಸರ ಪ್ರಕಾರ, ಮಂದಮಾರಿಯ ಅಂಗಡಿ ಬಜಾರ್ ನ ಕೋಮುರಾಜು ರಾಮುಲು, ಆತನ ಪತ್ನಿ ಸ್ವರೂಪ ಹಾಗೂ ಅವರ ಪುತ್ರನಾದ ಶ್ರೀನಿವಾಸ್ ಪಟ್ಟಣದ ಹೊರವಲಯದಲ್ಲಿನ ಗಂಗನೀಲ್ಲಪಂಪುಲ ಬಳಿ ಮೇಕೆಯ ಗುಂಪೊಂದನ್ನು ಸಾಕಿಕೊಂಡಿದ್ದರು. ಆ ಗುಂಪಿನಿಂದ ಮೇಕೆಯೊಂದು ಕಾಣೆಯಾಗಿರುವುದು ಇಪ್ಪತ್ತು ದಿನಗಳ ಹಿಂದೆ ಅವರ ಗಮನಕ್ಕೆ ಬಂದಿತ್ತು. ಇದರ ಹಿಂದೆ ದಲಿತ ವ್ಯಕ್ತಿ ಹಾಗೂ ಗೋದಾವರಿಖಾನಿಯ ನಿವಾಸಿ ಚಿಲುಮುಲ ಕಿರಣ್ (30) ಹಾಗೂ ಕುರಿಗಾಹಿ ಬಾಲಕ ತೇಜಾ(19)ನ ಕೈವಾಡವಿರಬಹುದು ಎಂದು ಅವರು ಶಂಕಿಸಿದ್ದಾರೆ.
ಶುಕ್ರವಾರ, ತೇಜಾ ಹಾಗೂ ಕಿರಣ್ ರನ್ನು ತಮ್ಮ ಮೇಕೆ ದೊಡ್ಡಿಗೆ ಕರೆಸಿಕೊಂಡಿರುವ ಕುಟುಂಬವು, ಅವರನ್ನು ಕಟ್ಟಿ ಹಾಕಿ, ತಲೆಕೆಳಕಾಗಿ ನೇತು ಹಾಕಿದೆ. ಅಲ್ಲೇ ಕೆಲವು ಪುರುಳೆಗಳನ್ನು ಸಂಗ್ರಹಿಸಿರುವ ಅವರು, ಆ ಅಸಹಾಯಕ ಸಂತ್ರಸ್ತರ ಕೆಳಗೆ ಅವಕ್ಕೆ ಬೆಂಕಿ ಹಚ್ಚಿ, ಹೊಗೆ ಹರಡುವಂತೆ ಮಾಡಿದ್ದಾರೆ. ನಂತರ ಈ ಅಮಾನುಷ ಘಟನೆಯನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದು, ಅದು ವೈರಲ್ ಆಗಿದೆ.
ತಮ್ಮ ಕಿರುಕುಳಕ್ಕೆ ಬೆದರಿ ಸಂತ್ರಸ್ತರು ತಮ್ಮ ತಪ್ಪನ್ನು ಒಪ್ಪಿಕೊಂಡು, ಮೇಕೆಯನ್ನು ಮರಳಿಸುತ್ತಾರೆ ಎಂದು ಆರೋಪಿಗಳು ಭಾವಿಸಿದ್ದಾರೆ. ಆದರೆ, ಗಂಟೆಗಟ್ಟಲೆ ಕಿರುಕುಳ ನೀಡಿದರೂ, ಯಾವುದೇ ಪ್ರಯೋಜನವಾಗದೆ ಅವರಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ದಾರೆ. ಈ ನಡುವೆ ಕಿರಣ್ ರ ಚಿಕ್ಕಮ್ಮ ಪೊಲೀಸ್ ಠಾಣೆಗೆ ತಲುಪಿ, ತಮ್ಮ ಕುಟುಂಬದ ಸದಸ್ಯನೊಬ್ಬ ಕಾಣೆಯಾಗಿರುವ ಕುರಿತು ದೂರು ನೀಡಿದ್ದಾರೆ.
ಆದರೆ, ಶನಿವಾರದಂದು ತೀವ್ರವಾಗಿ ಗಾಯಗೊಂಡಿದ್ದ ತೇಜಾ ಹಾಗೂ ಕಿರಣ್ ತಮ್ಮ ಮನೆಗಳಿಗೆ ಹಿಂದಿರುಗಿದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ. ಕೂಡಲೇ ಮಂದಾಮಾರಿಗೆ ಧಾವಿಸಿರುವ ಬೆಲ್ಲಂಪಲ್ಲಿ ಸಹಾಯಕ ಪೊಲೀಸ್ ಆಯುಕ್ತ ಬಿ. ಸಾದಯ್ಯ ಹಾಗೂ ಸಬ್ ಇನ್ಸ್ ಪೆಕ್ಟರ್ ಚಂದ್ರಕುಮಾರ್, ಘಟನೆಯ ಕುರಿತು ವಿಚಾರಣೆ ಕೈಗೊಂಡಿದ್ದಾರೆ. ನಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿ ಕುಟುಂಬದ ಮೂವರು ಸದಸ್ಯರು ಹಾಗೂ ಅವರ ಸಹಾಯಕ ನರೇಶ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.