ಎನ್ಡಿಎಗೆ ಬಿಗ್ ಶಾಕ್ : ಮೈತ್ರಿಕೂಟ ತೊರೆದ ದಲಿತ ಪಕ್ಷ ಆರ್ಎಲ್ಜೆಪಿ
ನಮ್ಮ ಪಕ್ಷಕ್ಕೆ ಅನ್ಯಾಯವಾಗಿದೆ ಎಂದ ಆರ್ಎಲ್ಜೆಪಿ ಮುಖ್ಯಸ್ಥ ಪಶುಪತಿ ಕುಮಾರ್ ಪಾರಸ್

ಪಶುಪತಿ ಕುಮಾರ್ ಪರಾಸ್ (Photo credit: X/@ANI)
ಹೊಸದಿಲ್ಲಿ : ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎನ್ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ದಲಿತ ಪಕ್ಷ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಆರ್ಎಲ್ಜೆಪಿ) ಅನ್ಯಾಯವನ್ನು ಉಲ್ಲೇಖಿಸಿ ಎನ್ಡಿಎ ಮೈತ್ರಿಕೂಟವನ್ನು ತೊರೆದಿದೆ.
ಎನ್ಡಿಎ ತೊರೆಯುವ ನಿರ್ಧಾರದ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಪಶುಪತಿ ಕುಮಾರ್ ಪಾರಸ್, ನಾವು 2014 ರಿಂದ ಇಲ್ಲಿಯವರೆಗೆ ಎನ್ಡಿಎ ಜೊತೆಗಿದ್ದೆವು, ನಾವು ಎನ್ಡಿಎಯ ನಿಷ್ಠಾವಂತ ಮಿತ್ರರಾಗಿದ್ದೆವು. ಲೋಕಸಭೆ ಚುನಾವಣೆ ನಡೆದಾಗ ಎನ್ಡಿಎ ದಲಿತ ಪಕ್ಷವಾದ ನಮ್ಮ ಪಕ್ಷಕ್ಕೆ ಅನ್ಯಾಯ ಮಾಡಿದೆ ಎಂದು ಹೇಳಿದರು.
ರಾಷ್ಟ್ರೀಯ ಹಿತಾಸಕ್ತಿಯಿಂದ ನಮ್ಮ ಪಕ್ಷವು ಚುನಾವಣೆಯಲ್ಲಿ ಎನ್ಡಿಎಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಬಿಹಾರದಲ್ಲಿ ಎನ್ಡಿಎ ಸಭೆ ನಡೆದಾಗ ಬಿಜೆಪಿ ರಾಜ್ಯ ಮುಖ್ಯಸ್ಥರು ಮತ್ತು ಜೆಡಿಯು ರಾಜ್ಯ ಮುಖ್ಯಸ್ಥರು ʼಬಿಹಾರದಲ್ಲಿ ಪಂಚ ಪಾಂಡವರು’ ಎಂದು ಹೇಳಿಕೆಗಳನ್ನು ನೀಡಿದರು. ಅವರು ಎಲ್ಲಿಯೂ ನಮ್ಮ ಪಕ್ಷದ ಹೆಸರನ್ನು ಉಲ್ಲೇಖಿಸಲಿಲ್ಲ. ನಾವು ಜನರ ಮಧ್ಯೆ ಹೋಗುತ್ತಿದ್ದೇವೆ ಮತ್ತು ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ನಾವು ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದೇವೆ. ಮಹಾಘಟಬಂಧನ್ ನಮಗೆ ಸರಿಯಾದ ಸಮಯದಲ್ಲಿ ಸರಿಯಾದ ಗೌರವವನ್ನು ನೀಡಿದರೆ, ಭವಿಷ್ಯದಲ್ಲಿ ನಾವು ಖಂಡಿತವಾಗಿಯೂ ರಾಜಕೀಯದ ಬಗ್ಗೆ ಯೋಚಿಸುತ್ತೇವೆ ಎಂದು ಹೇಳಿದರು.