ಹಿಮಾಚಲದಲ್ಲಿ ಇಬ್ಬರು ರಷ್ಯನ್ನರ ಮೃತದೇಹ ಪತ್ತೆ
photo: freepic
ಕುಲು: ಭಾರತಕ್ಕೆ ಪ್ರವಾಸ ಬಂದಿದ್ದ ಇಬ್ಬರು ರಷ್ಯನ್ ಪ್ರವಾಸಿಗರ ಮೃತದೇಹ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ. 37 ವರ್ಷದ ಪುರುಷ ಹಾಗೂ 21 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಕುಲು ಜಿಲ್ಲೆಯ ಪಾರ್ವತಿ ಕಣಿವೆ ಪ್ರದೇಶದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
ಮೃತರನ್ನು ಬೆಲೆಸ್ಕಿ ಮುಕ್ಸಿಮ್ ಮತ್ತು ರಂಟ್ಸೆವಾ ಅನ್ನಾ ಎಂದು ಗುರುತಿಸಲಾಗಿದೆ. ಮಣಿಕರಣ್ ನಿಂದ ಸುಮಾರು 2 ಕಿಲೋಮೀಟರ್ ದೂರದ ಬಿಸಿನೀರ ಬುಗ್ಗೆ ಕೊಳದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಸ್ಕಿನ್ ಅವರ ಕೈಯಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಇಬ್ಬರ ಮುಖ ಕೂಡಾ ಊದಿಕೊಂಡಿದೆ ಎಂದು ವಿವರಿಸಿದ್ದಾರೆ. ರಷ್ಯಾದ ರಾಯಭಾರ ಕಚೇರಿ ಮೂಲಕ ತನ್ನ ಫೋನನ್ನು ರಷ್ಯಾದಲ್ಲಿರುವ ಕುಟುಂಬಕ್ಕೆ ಕಳುಹಿಸಿಕೊಡಬೇಕು ಎಂದು ಕೋರಿ ಅನ್ನಾ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಪೊಲೀಸರ ಕೈಸೇರಿದೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಬ್ಬರ ಕಳೇಬರವನ್ನು ರಷ್ಯಾದ ರಾಯಭಾರ ಕಚೇರಿಗೆ ಕಳುಹಿಸಿಕೊಡುವಂತೆ ಕೋರಿರುವ ಮತ್ತೊಂದು ಪತ್ರ ಕೂಡಾ ಸಿಕ್ಕಿದೆ. "ಆರಂಭದಲ್ಲಿ ಇದನ್ನು ಅವಳಿ ಕೊಲೆ ಪ್ರಕರಣ ಎಂದು ಶಂಕಿಸಿದ್ದೆವು. ಆದರೆ ಈ ಟಿಪ್ಪಣಿಗಳು ಪತ್ತೆಯಾದ ಬಳಿಕ ಇದು ಆತ್ಮಹತ್ಯೆ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಇದು ಮಾದಕ ವಸ್ತುಗಳನ್ನು ಅತಿಯಾಗಿ ಬಳಕೆ ಮಾಡಿರುವ ಪ್ರಕರಣವಾಗಿರುವ ಸಾಧ್ಯತೆಯೂ ಇದೆ. ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ" ಎಂದು ಪೊಲೀಸರು ವಿವರಿಸಿದ್ದಾರೆ.
ಸರ್ಕಾರಿ ವಲಯ ಆಸ್ಪತ್ರೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಸಾವಿನ ಬಗ್ಗೆ ರಷ್ಯಾ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಕುಲು ಎಎಸ್ಪಿ ಸಂಜೀವ್ ಚೌಹಾಣ್ ಹೇಳಿದ್ದಾರೆ.