“ಅಬ್ಬೂ… ಇದು ನನ್ನ ಕೊನೆಯ ಕರೆ…” ಎಂದಿದ್ದ ಶಹಝಾದಿಗೆ ಅಬುಧಾಬಿಯಲ್ಲಿ ಮರಣದಂಡನೆ
ಭಾರತೀಯ ಮಹಿಳೆಗೆ ಕಳೆದ ತಿಂಗಳೇ ಗಲ್ಲು ಶಿಕ್ಷೆ ವಿಧಿಸಲಾಗಿದೆ : ದಿಲ್ಲಿ ಹೈಕೋರ್ಟ್ ಗೆ ತಿಳಿಸಿದ ವಿದೇಶಾಂಗ ಸಚಿವಾಲಯ

Photo : news18
ಹೊಸದಿಲ್ಲಿ :ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅಬುಧಾಬಿಯಲ್ಲಿ ನಾಲ್ಕು ತಿಂಗಳ ಮಗುವಿನ ಸಾವಿನ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಶಹಝಾದಿ ಖಾನ್ ಅವರನ್ನು ಫೆಬ್ರವರಿ 15 ರಂದು ಗಲ್ಲಿಗೇರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಸೋಮವಾರ ದಿಲ್ಲಿ ಹೈಕೋರ್ಟ್ಗೆ ತಿಳಿಸಿದೆ.
ಶಹಝಾದಿ ಅವರ ಅಂತ್ಯಕ್ರಿಯೆ ಮಾರ್ಚ್ 5 ರಂದು ಅಬುಧಾಬಿಯಲ್ಲಿ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯವನ್ನು ಪ್ರತಿನಿಧಿಸಿದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಚೇತನ್ ಶರ್ಮಾ ನ್ಯಾಯಮೂರ್ತಿ ಸಚಿನ್ ದತ್ತ ನೇತೃತ್ವದ ಪೀಠಕ್ಕೆ ತಿಳಿಸಿದರು. ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅವರ ಕುಟುಂಬಕ್ಕೆ ಸಂಪೂರ್ಣ ಸಹಾಯ ಮಾಡುವುದಾಗಿ ಸಚಿವಾಲಯ ನ್ಯಾಯಾಲಯಕ್ಕೆ ಭರವಸೆ ನೀಡಿತು.
ಪರಿಸ್ಥಿತಿಯನ್ನು ಅತ್ಯಂತ ದುರದೃಷ್ಟಕರ ಎಂದು ಕರೆದ ನ್ಯಾಯಾಲವು ಶಹಝಾದಿ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು. ಶಹಝಾದಿ ಅವರ ತಂದೆ ತಮ್ಮ ಮಗಳನ್ನು ಮರಣದಂಡನೆ ಶಿಕ್ಷೆಯಿಂದ ತಡೆಯಲು ವಿದೇಶಾಂಗ ಸಚಿವಾಲಯ ಮದ್ಯಪ್ರವೇಶಿಸಲು ನಿರ್ದೇಶನ ನೀಡಬೇಕು, ಪ್ರಸಕ್ತ ಸ್ಥಿತಿಗತಿಯನ್ನು ತಿಳಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಶಹಝಾದಿ ಅಬುಧಾಬಿಗೆ ತೆರಳಿದ್ದೇಗೆ?
ಉತ್ತರಪ್ರದೇಶದ ಬಂದಾ ಜಿಲ್ಲೆಯ ಮತೌಂಧ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊಯ್ರಾ ಮುಗ್ಲಿ ಗ್ರಾಮದ ನಿವಾಸಿಯಾಗಿರುವ ಶಹಝಾದಿ ಬಡ ಕುಟುಂಬದ ಹೆಣ್ಣು ಮಗಳು, ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕೆಗೆ ಸುಟ್ಟ ಗಾಯಗಳಾಗಿದ್ದವು. ಈಕೆಗೆ ಆಗ್ರಾದ ನಿವಾಸಿ ಉಝೈರ್ ಎಂಬಾತನನ್ನು ಫೇಸ್ಬುಕ್ ಮೂಲಕ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. 2021ರಲ್ಲಿ ಆಕೆಯ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ಆಗ್ರಾಕ್ಕೆ ಕರೆದುಕೊಂಡು ಹೋದ ಉಝೈರ್ ಆಕೆಯನ್ನು ತನ್ನ ಸಂಬಂಧಿಕರಾದ ಫೈಝ್ ಮತ್ತು ನಾದಿಯಾ ಎಂಬ ದಂಪತಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಆಕೆಯನ್ನು ದಂಪತಿ ದುಬೈಗೆ ಕರೆದುಕೊಂಡು ಹೋಗಿದ್ದಾರೆ.
ಶಹಝಾದಿ ಕೆಲಸಕ್ಕಿದ್ದ ಮನೆಯಲ್ಲಿ, ಇದ್ದಕ್ಕಿದ್ದಂತೆ ಒಂದು ದಿನ ಅವರ ಮಗುವಿನ ಆರೋಗ್ಯ ಹದಗೆಟ್ಟು ಮೃತಪಟ್ಟಿದೆ. ಮಗು ಮೃತಪಟ್ಟ ಎರಡು ತಿಂಗಳ ನಂತರ ಮಗುವಿನ ಸಾವಿಗೆ ಶಹಝಾದಿ ಕಾರಣ ಎಂದು ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಬಳಿಕ ಅವರ ಬಂಧನವೂ ನಡೆದಿದೆ. ಈ ಕುರಿತ ತನಿಖೆಯ ನಂತರ ದುಬೈ ನ್ಯಾಯಾಲಯವು ಶಹಝಾದಿ ತಪ್ಪಿತಸ್ಥೆ ಎಂದು ಮರಣದಂಡನೆ ಶಿಕ್ಷೆ ವಿಧಿಸಿದೆ. ಆ ಬಳಿಕ ಶಹಝಾದಿ ಅಲ್ಬತ್ವಾ ಜೈಲಿನಲ್ಲಿ ಬಂಧಿಯಾಗಿದ್ದರು.
ಮಗುವಿನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಶಹಝಾದಿ ಮತ್ತು ಆಕೆಯ ತಂದೆ ಹೇಳಿಕೊಂಡಿದ್ದಾರೆ. ಆದರೆ, ದಂಪತಿಗಳು ಶಹಝಾದಿಯ ಮೇಲೆ ಆರೋಪವನ್ನು ಹೊರಿಸಿದರು. ಇದು ಆಕೆಯ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಅಂತಿಮವಾಗಿ ಮರಣದಂಡನೆ ಶಿಕ್ಷೆ ವಿಧಿಸಲು ಕಾರಣವಾಗಿದೆ.
ಫೆಬ್ರವರಿ 14, 2025 ರಂದು, ಶಹಝಾದಿ ಜೈಲಿನಿಂದ ತನ್ನ ತಂದೆಗೆ ಕರೆ ಮಾಡಿ, ತನ್ನ ಮರಣದಂಡನೆ ಸನ್ನಿಹಿತವಾಗಿದೆ, “ಅಬ್ಬೂ… ಇದು ನನ್ನ ಕೊನೆಯ ಕರೆ…” ಎಂದು ಕಾಲ್ ಕಟ್ ಮಾಡಿದ್ದರು.