ಒಡಿಶಾ | ಸಿಮೆಂಟ್ ಪ್ಲಾಂಟ್ ಕಟ್ಟಡ ಕುಸಿತ; ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ

Screengrab:X/@ANI
ಸುಂದರ್ ಗಢ (ಒಡಿಶಾ): ಒಡಿಶಾದ ಸುಂದರ್ ಗಢ ಜಿಲ್ಲೆಯ ರಾಜ್ ಗನ್ಪುರ್ ನಲ್ಲಿರುವ ದಾಲ್ಮಿಯ ಭಾರತ್ ಸಿಮೆಂಟ್ ಲಿಮಿಟೆಡ್ ಘಟಕದ ಪಾರ್ಶ್ವವೊಂದು ಕುಸಿದು ಬಿದ್ದ ಪರಿಣಾಮ, ಕಟ್ಟಡದ ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಿಮೆಂಟ್ ಘಟಕದ ಆವರಣದೊಳಗಿನ ಬೃಹತ್ ಕಲ್ಲಿದ್ದಲು ಹಾಪರ್, ಉಕ್ಕಿನ ಕಟ್ಟಡವು ಗುರುವಾರ ಸಂಜೆ ಕುಸಿದು ಬಿದ್ದಿದ್ದರಿಂದ ಈ ಘಟನೆ ನಡೆದಿದೆ.
ತುರ್ತು ಸ್ಪಂದನಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಚಾಲನೆ ನೀಡಿವೆ. ಪೊಲೀಸ್ ಮಹಾ ನಿರೀಕ್ಷಕ, ಪೊಲೀಸ್ ವರಿಷ್ಠಾಧಿಕಾರಿ, ಉಪ ಜಿಲ್ಲಾಧಿಕಾರಿಗಳನ್ನು ಸಿಮೆಂಟ್ ಘಟಕದೊಳಗೆ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಘಟನಾ ಸ್ಥಳದಲ್ಲಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಕ್ಷಣಾ ತಂಡಗಳು ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿರುವ ಕಾರ್ಮಿಕರ ಬಳಿಗೆ ತಲುಪಲು ಪ್ರಯತ್ನಿಸುತ್ತಿವೆ. ಘಟನೆಯಲ್ಲಿ ಸಾವು-ನೋವು ಸಂಭವಿಸಿರಬಹುದು ಎಂದು ರಕ್ಷಣಾ ತಂಡಗಳು ವರದಿಗಾರರಿಗೆ ಮಾಹಿತಿ ನೀಡಿವೆಯಾದರೂ, ನಿಖರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ.
ಈ ನಡುವೆ, ಕಾರ್ಖಾನೆಯ ವ್ಯವಸ್ಥಾಪಕರು, ಪಾಳಿ ಮೇಲ್ವಿಚಾರಕರು ಹಾಗೂ ಸುರಕ್ಷತಾ ಮೇಲ್ವಿಚಾರಕರನ್ನು ಬಂಧಿಸಿ, ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಸುಂದರ್ ಗಢ ಶಾಸಕ ರಾಜೆನ್ ಎಕ್ಕಾ, ಮೃತ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು ಹಾಗೂ ಗಾಯಗೊಂಡಿರುವವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.