ಮಣಿಪುರ ಹಿಂಸಾಚಾರದ ಬಗ್ಗೆ ಯುರೋಪಿಯನ್ ಸಂಸತ್ ನಲ್ಲಿ ಚರ್ಚೆ
The European Parliament in Strasbourg.| Photo: Wikipedia
ಹೊಸದಿಲ್ಲಿ: ಮಣಿಪುರದಲ್ಲಿ ಸುಮಾರು ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ಯುರೋಪಿಯನ್ ಸಂಸತ್ ನ ಸದಸ್ಯರು ನಿರ್ಧರಿಸಿದ್ದಾರೆ.
ಮಣಿಪುರ ಹಿಂಸಾಚಾರ ಕುರಿತ ಚರ್ಚೆಗೆ ಸಂಬಂಧಿಸಿದ ನಿರ್ಣಯವೊಂದನ್ನು ಯುರೋಪಿಯನ್ ಸಂಸತ್ ನಲ್ಲಿ ಜೂನ್ 11ರಂದು ಮಂಡಿಸಲಾಗಿತ್ತು. ಅದರ ಬಗ್ಗೆ ಚರ್ಚೆಯು ‘‘ಮಾನವಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದ ಉಲ್ಲಂಘನೆ ಪ್ರಕರಣಗಳ ಚರ್ಚೆಗೆ ಅವಕಾಶ ಮಾಡಿಕೊಡುವ ಕಾನೂನಿನ’’ ಅಡಿಯಲ್ಲಿ ಬುಧವಾರ (ಯುರೋಪಿಯನ್ ಸಮಯ) ನಡೆಯಲಿದೆ. ನಿರ್ಣಯದ ಕುರಿತ ಮತದಾನವು ಗುರುವಾರ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯ ಫ್ರಾನ್ಸ್ ಭೇಟಿಗೆ ಒಂದು ದಿನ ಮೊದಲು ಈ ಬೆಳವಣಿಗೆ ನಡೆದಿದೆ. ಅವರು ಪ್ಯಾರಿಸ್ ನಲ್ಲಿ ಜುಲೈ 14ರಂದು ನಡೆಯುವ ಫ್ರಾನ್ಸ್ ನ ‘ಬ್ಯಾಸ್ಟೈಲ್ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿರುತ್ತಾರೆ.
ಆರು ಸಂಸದೀಯ ಗುಂಪುಗಳು ಯುರೋಪಿಯನ್ ಯೂನಿಯನ್ ಸಂಸತ್ ನಲ್ಲಿ ನಿರ್ಣಯವನ್ನು ಮಂಡಿಸಿವೆ. ಅವುಗಳೆಂದರೆ ಲೆಫ್ಟ್ ಗ್ರೂಪ್, ವರ್ಟ್ಸ್/ಎಎಲ್ಇ ಗ್ರೂಪ್, ಎಸ್ ಮತ್ತು ಡಿ ಗ್ರೂಪ್, ರೀನ್ಯೂ ಗ್ರೂಪ್, ಇಸಿಆರ್ ಗ್ರೂಪ್ ಮತ್ತು ಪಿಪಿಇ ಗ್ರೂಪ್.
ಕೇಂದ್ರದ ಭಾರತೀಯ ಜನತಾ ಪಕ್ಷದ ಸರಕಾರವು ಮಾನವಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಹಾಗೂ ಭಿನ್ನಮತ, ನಾಗರಿಕ ಸಮಾಜ ಮತ್ತು ಪತ್ರಕರ್ತರ ವಿರುದ್ಧ ದಮನ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮಣಿಪುರದಲ್ಲಿನ ಹಿಂಸಾಚಾರ, ಪ್ರಾಣಹಾನಿ ಮತ್ತು ಸೊತ್ತು ನಷ್ಟವನ್ನೂ ನಿರ್ಣಯವು ಖಂಡಿಸಿದೆ. ಬಿಜೆಪಿ ಪಕ್ಷದ ನಾಯಕರ ‘‘ರಾಷ್ಟ್ರೀಯವಾದಿ ಕೃತಕ ಘೋಷಣೆಗಳನ್ನೂ’’ ಅದು ‘‘ಕಟುವಾದ ಪದಗಳಲ್ಲಿ’’ ಖಂಡಿಸಿದೆ.
ವಿಶ್ವಾಸವನ್ನು ಮರುನಿರ್ಮಿಸಲು ಸಾಧ್ಯವಾಗುವಂತೆ ಸಂಯಮ ವಹಿಸುವಂತೆ ಈ ಗುಂಪುಗಳು ಮಣಿಪುರದ ವಿವಿಧ ಸಮುದಾಯಗಳಿಗೆ ಕರೆ ನೀಡಿವೆ. ಅದೇ ರೀತಿ, ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುವಂತೆ ಅದು ರಾಜಕೀಯ ನಾಯಕರನ್ನು ಒತ್ತಾಯಿಸಿದೆ. ಅದೂ ಅಲ್ಲದೆ, ‘ಭಯಾನಕ’ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆಯನ್ನೂ ರದ್ದುಪಡಿಸುವಂತೆ ಗುಂಪುಗಳು ಕೇಂದ್ರ ಸರಕಾರಕ್ಕೆ ಕರೆ ನೀಡಿವೆ.
ಮಣಿಪುರದಲ್ಲಿ ಕುಕಿ ಮತ್ತು ಮೆಟಾಯ್ ಸಮುದಾಯಗಳ ನಡುವೆ ಮೇ 3ರಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಈಗಲೂ ಅಲ್ಲಿ ವ್ಯಾಪಕವಾಗಿ ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತಿವೆ. 140ಕ್ಕೂ ಅಧಿಕ ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. 60,000ಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದು ಪಲಾಯನಗೈದಿದ್ದಾರೆ.
ಸಂಪೂರ್ಣ ಆಂತರಿಕ ವಿಷಯ: ಭಾರತ
ಮಣಿಪುರ ಹಿಂಸಾಚಾರದ ಬಗ್ಗೆ ಯುರೋಪಿಯನ್ ಸಂಸತ್ನಲ್ಲಿ ಚರ್ಚೆ ನಡೆಯುವ ಗಂಟೆಗಳ ಮೊದಲು ಹೇಳಿಕೆಯೊಂದನ್ನು ನೀಡಿರುವ ಭಾರತ, ಈ ವಿಷಯವು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ ಎಂದು ಹೇಳಿದೆ.
‘‘ಇಂದು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ. ನಾವು ಇದನ್ನು ಯುರೋಪಿಯನ್ ಸಂಸದರಿಗೂ ತಿಳಿಸಿದ್ದೇವೆ’’ ಎಂದು ವಿದೇಶ ಕಾರ್ಯದರ್ಶಿ ವಿನಯ ಮೋಹನ್ ಕ್ವಾತ್ರ ಹೇಳಿದರು.
ಲಾಬಿ ಕಂಪೆನಿಯನ್ನು ನಿಯೋಜಿಸಿದ ಭಾರತ
ಈ ನಡುವೆ, ಯುರೋಪಿಯನ್ ಸಂಸತ್ ನಲ್ಲಿ ತನ್ನನ್ನು ಪ್ರತಿನಿಧಿಸಲು ಭಾರತ ಸರಕಾರವು ಯುರೋಪನ್ ಪ್ರಮುಖ ಲಾಬಿ ಕಂಪೆನಿಗಳ ಪೈಕಿ ಒಂದಾಗಿರುವ ‘ಆ್ಯಲ್ಬರ್ ಮತ್ತು ಗೈಗರ್’ನ್ನು ನಿಯೋಜಿಸಿದೆ. ಮಣಿಪುರದಲ್ಲಿ ಸಂಘರ್ಷ ಸುದೀರ್ಘ ಅವಧಿಯಿಂದ ನಡೆಯುತ್ತಿದೆ ಎಂದು ಲಾಬಿ ಕಂಪೆನಿಯು ಹೇಳಿಕೆಯೊಂದರಲ್ಲಿ ಹೇಳಿಕೊಂಡಿದೆ.
‘‘ಈಗ, ಭಾರತ ಸರಕಾರವು ರಾಜ್ಯದಲ್ಲಿನ ಸಂಘರ್ಷವನ್ನು ನಿವಾರಿಸಲು ಮತ್ತು ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಿರಂತರವಾಗಿ ಶ್ರಮಿಸುತ್ತಿದೆ. ಸಂಬಂಧಪಟ್ಟ ಪಕ್ಷಗಳ ನಡುವೆ ಸಂವಹನ ಏರ್ಪಡಿಸುವುದಕ್ಕಾಗಿ ಕೇಂದ್ರ ಸರಕಾರವು ಮಣಿಪುರದಲ್ಲಿ ಶಾಂತಿ ಸಮಿತಿಯೊಂದನ್ನೂ ರಚಿಸಿದೆ’’ ಎಂದು ಅದು ಹೇಳಿಕೊಂಡಿದೆ.