ದಿಲ್ಲಿ: ನ. 13ರಿಂದ 20ರವರೆಗೆ ಸರಿ-ಬೆಸ ನಿಯಮ; ದಿಲ್ಲಿ ಪರಿಸರ ಸಚಿವ ಘೋಷಣೆ
► 10, 12 ತರಗತಿ ಹೊರತುಪಡಿಸಿ ನ. 10ರವರೆಗೆ ಶಾಲೆಗಳು ಬಂದ್
ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ Photo- PTI
ಹೊಸದಿಲ್ಲಿ: ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ಕಾರುಗಳಿಗೆ ಅನ್ವಯಿಸುವ ಸರಿ-ಬೆಸ ನಿಯಮವು ನವೆಂಬರ್ 13ರಿಂದ 20ರವರೆಗೆ ಜಾರಿಯಲ್ಲಿರುತ್ತದೆ ಎಂದು ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ ಸೋಮವಾರ ಪ್ರಕಟಿಸಿದ್ದಾರೆ. ಅದೇ ವೇಳೆ, ಕುಸಿಯುತ್ತಿರುವ ವಾಯು ಗುಣಮಟ್ಟದ ಹಿನ್ನೆಲೆಯಲ್ಲಿ, 10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ಎಲ್ಲಾ ತರಗತಿಗಳು ನವೆಂಬರ್ 10ರವರೆಗೆ ಮುಚ್ಚಿರುತ್ತವೆ ಎಂದು ಅವರು ಹೇಳಿದರು.
ಬಿಎಸ್3 ಪೆಟ್ರೋಲ್ ಮತ್ತು ಬಿಎಸ್4 ಡೀಸೆಲ್ ಕಾರುಗಳ ಮೇಲೆ ದಿಲ್ಲಿಯಲ್ಲಿ ಹೇರಲಾಗಿರುವ ನಿಷೇಧ ಮುಂದುವರಿಯುತ್ತದೆ ಹಾಗೂ ನಗರದಲ್ಲಿ ಯಾವುದೇ ನಿರ್ಮಾಣ ಸಂಬಂಧಿ ಕಾಮಗಾರಿ ನಡೆಯುವುದಿಲ್ಲ ಎಂದು ರೈ ಹೇಳಿದರು.
ಸರಿ-ಬೆಸ ನಿಯಮದ ಪ್ರಕಾರ, ಕಾರುಗಳ ನಂಬರ್ ಪ್ಲೇಟ್ಗಳ ಕೊನೆಯ ಅಂಕೆಯ ಆಧಾರದಲ್ಲಿ ದಿನ ಬಿಟ್ಟು ದಿನ ಅವುಗಳನ್ನು ರಸ್ತೆಗೆ ಇಳಿಸಬಹುದಾಗಿದೆ. ಬೆಸ ಸಂಖ್ಯೆಯ ದಿನದಂದು, ನಂಬರ್ ಪ್ಲೇಟ್ಗಳ ಕೊನೆಯ ಅಂಕೆ 1, 3, 5,7 ಮತ್ತು 9 ಆಗಿರುವ ಕಾರುಗಳು ಮತ್ತು ಸರಿ ಸಂಖ್ಯೆಯ ದಿನದಂದು ನಂಬರ್ ಪ್ಲೇಟ್ಗಳ ಕೊನೆಯ ಅಂಕೆ 0, 2, 4, 6 ಮತ್ತು 8 ಆಗಿರುವ ಕಾರುಗಳು ರಸ್ತೆಗಿಳಿಯಬಹುದಾಗಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಗೋಪಾಲ್ ರೈ ಈ ಘೋಷಣೆಯನ್ನು ಹೊರಡಿಸಿದರು. ಸಂಬಂಧಿತ ಇತರ ಇಲಾಖೆಗಳ ಅಧಿಕಾರಿಗಳು, ದಿಲ್ಲಿ ಶಿಕ್ಷಣ ಸಚಿವೆ ಆತಿಶಿ ಮತ್ತು ಸಚಿವರಾದ ಸೌರಭ್ ಭಾರದ್ವಾಝ್ ಮತ್ತು ಖೈಲಾಶ್ ಗಹ್ಲೋಟ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದರು.
ವಾಯು ಗುಣಮಟ್ಟ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಗ್ರೇಡಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್ (ಜಿಆರ್ಎಪಿ)ನ ನಾಲ್ಕನೇ ಹಂತದಲ್ಲಿ ದಿಲ್ಲಿಯನ್ನು ರವಿವಾರ ಇರಿಸಲಾಗಿದೆ. ಇದು ಮಾಲಿನ್ಯ ನಿಗ್ರಹ ಯೋಜನೆಯಲ್ಲಿ ಕೊನೆಯ ಹಂತವಾಗಿದೆ.
ವಾಯು ಮಾಲಿನ್ಯ ನಿಗ್ರಹ ಯೋಜನೆಯ ಅಂತಿಮ ಹಂತದಲ್ಲಿ, ಸರಕಾರಿ ಮತ್ತು ಖಾಸಗಿ ಕಚೇರಿಗಳ 50 ಶೇಕಡ ಉದ್ಯೋಗಿಗಳು ಮನೆಯಲ್ಲಿ ಕೆಲಸ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. ಟ್ರಕ್ಗಳು ದಿಲ್ಲಿ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.