ದಿಲ್ಲಿ ವಿಧಾನಸಭಾ ಚುನಾವಣೆ | ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ವಂಚನೆ : ಆಪ್ ಆರೋಪ
ಸಂಜಯ್ ಸಿಂಗ್ | PC : PTI
ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ನೋಂದಣಿ ಅಕ್ರಮದಲ್ಲಿ ಬಿಜೆಪಿಯ ಉನ್ನತ ನಾಯಕತ್ವ ಹಾಗೂ ಕೇಂದ್ರ ಸಚಿವರು ಭಾಗಿಯಾಗಿದ್ದಾರೆ ಎಂದು ಶನಿವಾರ ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಪ್ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ರಾಜಧಾನಿಯ ವಿವಿಧ ವಿಳಾಸಗಳ ಮೂಲಕ ನಕಲಿ ಮತದಾರರನ್ನು ನೋಂದಣಿಗೆ ಅರ್ಜಿ ಸಲ್ಲಿಸುವ ಮೂಲಕ, ಬಿಜೆಪಿಯ ಉನ್ನತ ನಾಯಕರು ಚುನಾವಣಾ ಆಯೋಗಕ್ಕೆ ವಂಚಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
“ಕೇಂದ್ರ ಸಚಿವರು, ಬಿಜೆಪಿ ಸಂಸದರು ಹಾಗೂ ನಾಯಕರು ಚುನಾವಣಾ ಆಯೋಗದ ಕಣ್ಣಿಗೆ ಮಣ್ಣೆರಚುವ ಮೂಲಕ ಅದರ ವಿಶ್ವಾಸಾರ್ಹಯೊಂದಿಗೆ ಆಟವಾಡುತ್ತಿದ್ದಾರೆ. ಅವರು ಚುನಾವಣಾ ಹಗರಣ ಮತ್ತು ವಂಚನೆಗಳನ್ನು ಎಸಗುತ್ತಿದ್ದಾರೆ. ಹೊಸ ದಿಲ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿರುವ, ಮಾಜಿ ಸಂಸದ ಪ್ರವೇಶ್ ವರ್ಮ ಹಾಲಿ ಸಂಸದರಲ್ಲದಿದ್ದರೂ, ಸಂಸದರ ಬಂಗಲೆಯನ್ನು ಮೇ ನಿಂದ ಜನವರಿವರೆಗೆ ಎಂಟು ತಿಂಗಳ ಕಾಲ ಆಕ್ರಮಿಸಿಕೊಂಡಿದ್ದರು” ಎಂದು ಅವರು ದೂರಿದರು.
“ಇದೊಂದೇ ಅಲ್ಲ. 33 ಮತದಾರರನ್ನು ನೋಂದಾಯಿಸಲು ಅವರು ತಮ್ಮ ಬಂಗಲೆಯ ವಿಳಾಸವನ್ನು ನೀಡಿದ್ದಾರೆ. ಎರಡನೆಯ ಹೆಸರು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿಯದ್ದಾಗಿದ್ದು, ಅವರು ತಮ್ಮ ವಿಳಾಸದಿಂದ 26 ಮತದಾರರ ಹೆಸರನ್ನು ನೋಂದಾಯಿಸಲು ಅರ್ಜಿ ನೀಡಿದ್ದಾರೆ. ತಮ್ಮ ವಿಳಾಸದಿಂದ 26 ಮತದಾರರನ್ನು ನೋಂದಾಯಿಸಲು ಕೇಂದ್ರ ಸಚಿವ ಕಮಲೇಶ್ ಪಾಸ್ವಾನ್ ಅರ್ಜಿ ನೀಡಿದ್ದಾರೆ” ಎಂದೂ ಅವರು ಆಪಾದಿಸಿದರು.
ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ತಮ್ಮ ಪಕ್ಷದ ಕಾರ್ಯಕರ್ತರ ವಿಳಾಸದಿಂದ ನೋಂದಾಯಿಸಲು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ ದೇವ್ ಆರೋಪಿಸಿದ ಬೆನ್ನಿಗೇ ಆಪ್ ಕೂಡಾ ಇಂತಹುದೇ ಆರೋಪ ಮಾಡಿದೆ.