ದೆಹಲಿ ಮಸೂದೆ: ಎನ್ ಡಿಎಗೆ ವೈಎಸ್ ಆರ್ ಕಾಂಗ್ರೆಸ್ ಬೆಂಬಲ
ಹೊಸದಿಲ್ಲಿ: ದೆಹಲಿಯ ಸೇವೆಗಳನ್ನು ನಿಯಂತ್ರಿಸುವ ಕೇಂದ್ರ ಸರ್ಕಾರದ ಮಸೂದೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸುವ ಮೂಲಕ ಉಭಯ ಸದನಗಳಲ್ಲಿ ಮಸೂದೆ ಸುಗಮವಾಗಿ ಆಂಗೀಕಾರವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಮಣಿಪುರ ವಿಚಾರದಲ್ಲಿ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯಲ್ಲೂ ಬಿಜೆಪಿ ಸರ್ಕಾರವನ್ನು ವೈಎಸ್‍ಆರ್ ಕಾಂಗ್ರೆಸ್ ಬೆಂಬಲಿಸಲಿದೆ.
ರಾಜ್ಯಸಭೆಯಲ್ಲಿ 9 ಮತ್ತು ಲೋಕಸಭೆಯಲ್ಲಿ 22 ಮಂದಿ ಸದಸ್ಯರನ್ನು ಹೊಂದಿರುವ ವೈಎಸ್‍ಆರ್ ಕಾಂಗ್ರೆಸ್, ಪ್ರಮುಖ ಮಸೂದೆಗಳಲ್ಲಿ ಸರ್ಕಾರವನ್ನು ಬೆಂಬಲಿಸುತ್ತಲೇ ಬಂದಿದೆ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ, ವಿವಾದಿತ ದೆಹಲಿ ಮಸೂದೆಗೆ ಕೂಡಾ ವೈಎಸ್‍ಆರ್ ಕಾಂಗ್ರೆಸ್ ಸದಸ್ಯರ ಬೆಂಬಲ ದೊರಕುವ ಮೂಲಕ ಮಸೂದೆ ಸುಲಭವಾಗಿ ಆಂಗೀಕಾರವಾಗಲಿದೆ.
ದೆಹಲಿಯ ಉನ್ನತ ಅಧಿಕಾರಿಗಳನ್ನು ನಿಯಂತ್ರಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯ ಬದಲು ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರದ (ತಿದ್ದುಪಡಿ) ಮಸೂದೆ ಜಾರಿಗೆ ಬರಲಿದೆ. ದೆಹಲಿಯಲ್ಲಿ ಚುನಾಯಿತ ಸರ್ಕಾರ ಇರುವ ಕಾರಣ ದೆಹಲಿಯ ಉನ್ನತ ಅಧಿಕಾರಿಗಳನ್ನು ನೇಮಿಸುವ ಮತ್ತು ವರ್ಗಾವಣೆ ಮಾಡುವ ಅಧಿಕಾರ ಕೇಂದ್ರಕ್ಕೆ ಇಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆ ಜಾರಿಗೆ ತಂದಿತ್ತು.
"ನಾವು ಎರಡೂ ವಿಚಾರಗಳಲ್ಲಿ ಸರ್ಕಾರದ ಪರವಾಗಿ ಮತ ಚಲಾಯಿಸಲಿದ್ದೇವೆ" ಎಂದು ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಮುಖಂಡ ವಿ.ವಿಜಯಸಾಯಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ದೆಹಲಿ ಮತ್ತು ಪಂಜಾಬ್‍ನಲ್ಲಿ ಬದ್ಧ ವೈರಿಗಳಾಗಿರುವ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಕಳೆದ ವಾರ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿತ್ತು.