ದಿಲ್ಲಿಯಲ್ಲಿ ಬಿಜೆಪಿಗೆ ಪ್ರಚಂಡ ಜಯ | ಯಾರಾಗಲಿದ್ದಾರೆ ದಿಲ್ಲಿ ಸಿಎಂ?

PC : NDTV
ಹೊಸದಿಲ್ಲಿ : ದಿಲ್ಲಿಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಾರಿಸಿದೆ. ಆಮ್ ಆದ್ಮಿ ಪಕ್ಷದ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಅದನ್ನು ಹೀನಾಯವಾಗಿ ಸೋಲಿಸಿದೆ. 27 ವರ್ಷಗಳ ಬಳಿಕ ದಿಲ್ಲಿ ಅಸೆಂಬ್ಲಿಯಲ್ಲಿ ಕಮಲ ಅರಳಿದೆ. ಆದರೆ ದಿಲ್ಲಿಯಲ್ಲಿ ಮತ್ತೆ ಬಿಜೆಪಿ ಸರಕಾರ ರಚಿಸುವಾಗ ಯಾರಾಗಲಿದ್ದಾರೆ ಹೊಸ ಮುಖ್ಯಮಂತ್ರಿ ಎನ್ನುವ ಕುತೂಹಲ ಮೂಡಿದೆ.
ದಿಲ್ಲಿ ಬಿಜೆಪಿ ಪಾಲಿನ ಅತಿದೊಡ್ಡ ದೌರ್ಬಲ್ಯವೇ ಅದರ ನಾಯಕತ್ವ ಎಂದು ಹೇಳಲಾಗುತ್ತಿತ್ತು. ಕೇಜ್ರಿವಾಲ್ ಎದುರು ನಿಂತು ಜನರ ವಿಶ್ವಾಸ ಗಳಿಸುವಂತಹ ಒಬ್ಬೇ ಒಬ್ಬ ವರ್ಚಸ್ವಿ ನಾಯಕ ಬಿಜೆಪಿಯಲ್ಲಿಲ್ಲ, ಹಾಗಾಗಿಯೇ ಬಿಜೆಪಿ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿತ್ತು.
ಆದರೆ ಈಗ ಸಾಮೂಹಿಕ ನಾಯಕತ್ವದಲ್ಲೇ ದಿಲ್ಲಿಯಲ್ಲಿ ಬಿಜೆಪಿ ಭಾರೀ ದೊಡ್ಡ ಜಯವನ್ನು ತನ್ನದಾಗಿಸಿಕೊಂಡಿದೆ. ಎಲ್ಲೆಲ್ಲಿ ಯಾವ ನಾಯಕರಿಗೆ ಪ್ರಾಮುಖ್ಯತೆ ಕೊಡಬೇಕೋ ಅಲ್ಲಲ್ಲಿ ಆಯಾ ನಾಯಕರನ್ನೇ ತೋರಿಸಿ ಎಲ್ಲ ವರ್ಗ, ಜಾತಿ, ಸಮುದಾಯಗಳ ಜನರನ್ನು ತನ್ನತ್ತ ಸೆಳೆದುಕೊಂಡಿದೆ ಬಿಜೆಪಿ.
ಈಗ ಯಾರ ನೇತೃತ್ವದಲ್ಲಿ ಬಿಜೆಪಿ ಸರಕಾರ ರಚಿಸಲಿದೆ ಎಂಬುದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯ . ಸದ್ಯಕ್ಕೆ ಸಿಎಂ ಕುರ್ಚಿಗೆ ಹಾಟ್ ಫೆವರಿಟ್ ಆಗಿರುವವರು ಯಾರೆಲ್ಲ ಅಂತ ನೋಡೋದಾದರೆ, ಮೊದಲು ಕೇಳಿ ಬರುವ ಹೆಸರು ಪರ್ವೇಶ್ ವರ್ಮಾ.
ಇವರು ದಿಲ್ಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಮಾಜಿ ಸಂಸದ. ದ್ವೇಷ ಭಾಷಣಕ್ಕೆ ಕುಖ್ಯಾತಿ ಪಡೆದವರು. ಖಟ್ಟರ್ ಹಿಂದುತ್ವವಾದಿಯಾಗಿ ಗುರುತಿಸಿಕೊಂಡವರು. ಈ ಬಾರಿ ಹೊಸದಿಲ್ಲಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇಜ್ರಿವಾಲ್ ರನ್ನೇ ಸೋಲಿಸಿದವರು. ಕೇಜ್ರಿವಾಲ್ ಗೆ ಸರಿಸಮಾನ ನಾಯಕರಿಲ್ಲ ಎಂಬ ಅಂದಾಜನ್ನು ಸುಳ್ಳಾಗಿಸಿ ಕೇಜ್ರಿವಾಲ್ ರನ್ನೇ ಸೋಲಿಸಿದ ಪರ್ವೇಶ್ ವರ್ಮಾ ಸಿಎಂ ಸ್ಥಾನಕ್ಕೆ ವರಿಷ್ಠರ ಮೊದಲ ಆಯ್ಕೆಯಾಗುವ ಸಾಧ್ಯತೆಯಿದೆ.
ಕಾಲ್ಕಾಜಿಯಲ್ಲಿ ಹಾಲಿ ಸಿಎಂ ಆತಿಷಿ ವಿರುದ್ಧ ಮಾಜಿ ಸಂಸದ, ಪ್ರಭಾವಿ ನಾಯಕ ರಮೇಶ್ ಬಿಧುರಿ ಸೋತಿರುವ ಕಾರಣ ಪರ್ವೇಶ್ ವರ್ಮಾ ಸಿಎಂ ಆಗುವ ಸಾಧ್ಯತೆಯೇ ಹೆಚ್ಚಿದೆ.
ದಿಲ್ಲಿಯಲ್ಲಿ ಕಳೆದ ಬಾರಿ ಆಮ್ ಆದ್ಮಿ ಪಕ್ಷದ ಸುನಾಮಿಯೇ ಬಂದಿದ್ದಾಗಲೂ ರೋಹಿಣಿ ಕ್ಷೇತ್ರದಿಂದ ಗೆದ್ದಿದ್ದವರು ವಿಜೇಂದರ್ ಗುಪ್ತಾ. ದಿಲ್ಲಿ ಬಿಜೆಪಿಯ ಅಧ್ಯಕ್ಷರಾಗಿ, ದಿಲ್ಲಿ ಅಸೆಂಬ್ಲಿಯಲ್ಲಿ ವಿಪಕ್ಷ ನಾಯಕರಾಗಿದ್ದವರು. ಬಿಜೆಪಿಯ ಈ ಹಿರಿಯ ನಾಯಕನಿಗೆ ಸಿಎಂ ಪಟ್ಟ ಕೊಟ್ಟರೂ ಆಶ್ಚರ್ಯವಿಲ್ಲ.
ಮೂರು ಬಾರಿ ಸತತವಾಗಿ ಗೆದ್ದಿರುವ ವಿಜೇಂದರ್ ಗುಪ್ತಾ ರಿಂದ ಪರ್ವೇಶ್ ವರ್ಮಾ ಸಿಎಂ ಸ್ಥಾನಕ್ಕೆ ದೊಡ್ಡ ಸ್ಪರ್ಧೆ ಎದುರಿಸಬಹುದು. ದಿಲ್ಲಿ ಗೆದ್ದಿರುವ ಬಿಜೆಪಿಯ ಮುಂದಿನ ಗುರಿ ಪಂಜಾಬ್ ನಲ್ಲೂ ಆಪ್ ಅನ್ನು ಸೋಲಿಸುವುದು. ಅದಕ್ಕಾಗಿ ರಾಜೋರಿ ಗಾರ್ಡನ್ ನಿಂದ ಗೆದ್ದಿರುವ ಸಿಖ್ ಸಮುದಾಯದ ಮಜಿಂದರ್ ಸಿಂಗ್ ಸಿರ್ಸಾ ಅವರಿಗೆ ಸಿಎಂ ಸ್ಥಾನ ಕೊಡುವ ಸಾಧ್ಯತೆಯೂ ಇದೆ.
ಕರೋಲ್ ಬಾಗ್ ನಿಂದ ಗೆದ್ದಿರುವ ದುಷ್ಯಂತ ಗೌತಮ್ ಬಿಜೆಪಿಯ ಹಿರಿಯ ದಲಿತ ನಾಯಕ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ತಳಮಟ್ಟದಿಂದ ಬೆಳೆದು ಬಂದ ಈ ನಾಯಕನೂ ಸಿಎಂ ರೇಸ್ ನಲ್ಲಿದ್ದಾರೆ. ಬಿಜೆಪಿಯ ದಿಲ್ಲಿ ಮಾಜಿ ಸಿಎಂ ಮದನ್ ಲಾಲ್ ಖುರಾನಾ ಅವರ ಪುತ್ರ ಹರೀಶ್ ಖುರಾನಾ ಈ ಬಾರಿ ಮೋತಿ ನಗರ್ ನಿಂದ ಗೆದ್ದಿದ್ದಾರೆ. ಇದೇ ಮೊದಲ ಬಾರಿ ಶಾಸಕರಾಗಿರುವ ಹರೀಶ್ ಅಚ್ಚರಿಯ ಸಿಎಂ ಅಭ್ಯರ್ಥಿ ಆದರೂ ಆಗಬಹುದು.
ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ಕೆಲವು ಹೆಸರುಗಳೂ ಕೇಳಿ ಬರುತ್ತಿವೆ. ಆದರೆ ದೆಹಲಿಯಲ್ಲಿ ವಿಧಾನ ಪರಿಷತ್ ಇಲ್ಲದ ಕಾರಣ ಇದರ ಸಾಧ್ಯತೆ ಕಡಿಮೆ. ಹಾಗಿದ್ದರೂ ಬಿಜೆಪಿಯ ಹೈ ಕಮಾಂಡ್ ಏನು ಮಾಡುತ್ತದೆ ಎಂದು ಊಹಿಸುವುದೇ ಕಷ್ಟ. ವಿಧಾನ ಸಭೆಯಲ್ಲಿಲ್ಲದವರಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ಹಾಲಿ ಸಂಸದೆ ಬಾಂಸುರಿ ಸ್ವರಾಜ್ ಅವರ ಹೆಸರೂ ಕೇಳಿಬರುತ್ತಿದೆ.