ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ
ಅರವಿಂದ್ ಕೇಜ್ರಿವಾಲ್ , ವಿ ಕೆ ಸಕ್ಸೇನಾ | PC : PTI
ಹೊಸದಿಲ್ಲಿ : ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ರಾಜ್ ನಿವಾಸ್ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ಲೆಫ್ಟಿನೆಂಟ್ ಗವರ್ನರ್ ಕಚೇರಿಯು, ಕೇಜ್ರಿವಾಲ್ ನೇತೃತ್ವದ ಎಎಪಿಯು 1993ರ ದಿಲ್ಲಿ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ದೇವೇಂದ್ರ ಪಾಲ್ ಭುಲ್ಲರ್ ಬಿಡುಗಡೆಗೆ ಅನುಕೂಲವಾಗುವಂತೆ ಖಲಿಸ್ತಾನಿ ಉಗ್ರ ಗುಂಪುಗಳಿಂದ 1.6 ಕೋಟಿ ಡಾಲರ್ ಹಣವನ್ನು ದೇಣಿಯಾಗಿ ಪಡೆದಿದೆ ಎಂದು ಆರೋಪಿಸಿರುವ ದೂರನ್ನು ಸಕ್ಸೇನಾ ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ.
"ದೂರುದಾರರು ಸಲ್ಲಿಸಿರುವ ಎಲೆಕ್ಟ್ರಾನಿಕ್ ಸಾಕ್ಷ್ಯಗಳಿಗೆ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ಸೇರಿದಂತೆ ತನಿಖೆಯ ಅಗತ್ಯವಿದೆ" ಎಂದು ಸಕ್ಸೇನಾ ಹೇಳಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯಿಂದ ರಾಜಕೀಯ ದೇಣಿಗೆ ಪಡೆದ ಆರೋಪದಲ್ಲಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಪರಿಗಣಿಸುವ ಒಂದು ದಿನ ಮುಂಚಿತವಾಗಿ ಈ ಘಟನೆ ವರದಿಯಾಗಿದೆ. ಎಎಪಿ ಮುಖ್ಯಸ್ಥರೂ ಆಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗಾಗಲೇ ತಿಹಾರ್ ಜೈಲಿನಲ್ಲಿದ್ದಾರೆ.