ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ವಿರುದ್ಧ ಸಾಕ್ಷಿ ಎಲ್ಲಿದೆ? ; ಸಿಬಿಐ, ಈಡಿಗೆ ಸುಪ್ರೀಂ ಪ್ರಶ್ನೆ
PHOTO : PTI
ಹೊಸದಿಲ್ಲಿ: ಮದ್ಯ ನೀತಿ ಹಗರಣದಲ್ಲಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಪಾತ್ರದ ಬಗ್ಗೆ ಯಾವ ಪುರಾವೆಗಳಿವೆ ಎಂದು ಪ್ರಕರಣದ ತನಿಖೆ ಮಾಡುವ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಕೇಳಿದೆ.
"ಪುರಾವೆ ಎಲ್ಲಿದೆ? ಸಾಕ್ಷಿ ಎಲ್ಲಿದೆ? ನೀವು ಘಟನೆಗಳ ಸರಣಿಯನ್ನು ಸ್ಥಾಪಿಸಬೇಕಿದೆ" ಎಂದು ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಗಳು, ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಬಿಐಗೆ ಕೇಳಿದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಸಿಸೋಡಿಯಾ ಪ್ರಕರಣದಲ್ಲಿ ಭಾಗಿಯಾಗಿರುವಂತೆ ತೋರುತ್ತಿಲ್ಲ ಎಂದು ಟೀಕಿಸಿದ ಸುಪ್ರೀಂ ಕೋರ್ಟ್, ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವುದು ಹೇಗೆ ಎಂದು ಪ್ರಶ್ನಿಸಿದೆ.
"ಮನೀಷ್ ಸಿಸೋಡಿಯಾ ಈ ಪ್ರಕರಣದಲ್ಲಿ ಭಾಗಿಯಾಗಿರುವಂತೆ ತೋರುತ್ತಿಲ್ಲ. ನೀವು ಅವರ ಮೇಲೆ ಅಕ್ರಮ ಹಣ ವರ್ಗಾವಣೆ ಕಾಯ್ದೆ ಪ್ರಕರಣ ಹೇಗೆ ದಾಖಲಿಸಿದ್ದೀರಿ? ಹಣ ಅವರಿಗೆ ಹೋಗುತ್ತಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ದಿನೇಶ್ ಅರೋರಾ ಹೇಳಿಕೆಯನ್ನು ಹೊರತುಪಡಿಸಿ ಸಿಸೋಡಿಯಾ ವಿರುದ್ಧ ಬೇರೆ ಯಾವ ಪುರಾವೆಯನ್ನೂ ಸಲ್ಲಿಸಲಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.