ಕಂಗನಾ ರಣಾವತ್ ಕುರಿತು ಸುಪ್ರಿಯಾ ಶ್ರಿನೇತ್ ಹೇಳಿಕೆ : ತನಿಖೆಗೆ ಸೂಚಿಸಿದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ | Photo : PTI
ಹೊಸದಿಲ್ಲಿ: ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಮಾಡಿದ್ದಾರೆನ್ನಲಾದ ಅವಹೇಳನಕಾರಿ ಪೋಸ್ಟ್ ಬಗ್ಗೆ ತನಿಖೆ ನಡೆಸುವಂತೆ ದಿಲ್ಲಿ ಪೊಲೀಸರಿಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಶ್ರಿನೇತ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಕುರಿತು ಕೂಲಂಕಶ ತನಿಖೆ ನಡೆಸುವಂತೆ ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ಸಕ್ಸೇನಾ ನಿರ್ದೇಶನ ನೀಡಿದ್ದಾರೆ.
ಮಹಿಳೆಯೊಬ್ಬರ ಘನತೆಗೆ ಧಕ್ಕೆ ತರುವಂಥ ಪೋಸ್ಟ್ ಮಾಡಿರುವ ಸುಪ್ರಿಯಾ ಶ್ರಿನೇತ್ ವಿರುದ್ಧ ತನಿಖೆ ನಡೆಸಬೇಕು ಹಾಗೂ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಬೇಕು ಎಂದು ಬಿಜೆಪಿ ನಾಯಕ ಬನ್ಸೂರಿ ಸ್ವರಾಜ್ ಅವರು ಲೆಫ್ಟಿನೆಂಟ್ ಗವರ್ನರ್ ಗೆ ದೂರು ನೀಡಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ದೂರನ್ನು ಪೊಲೀಸ್ ಆಯುಕ್ತರಿಗೆ ವರ್ಗಾಯಿಸಿರುವ ಲೆಫ್ಟಿನೆಂಟ್ ಗವರ್ನರ್, ಈ ಕುರಿತು ವೈಜ್ಞಾನಿಕವಾಗಿ ತನಿಖೆ ನಡೆಸಬೇಕು ಎಂದು ಸೂಚಿಸಿದ್ದು, ಅಗತ್ಯ ಬಿದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿರುವ ಶ್ರಿನೇತ್ ಪ್ರತಿಪಾದನೆಯ ಕುರಿತೂ ತನಿಖೆ ನಡೆಸಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದಾರೆ.
ಈ ಸಂಬಂಧ ಬುಧವಾರ ಚುನಾವಣಾ ಆಯೋಗವು ಸುಪ್ರಿಯಾ ಶ್ರಿನೇತ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.