ದಿಲ್ಲಿ ಪೊಲೀಸರಿಂದ ದಾಳಿಗೊಳಗಾದ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಯಾರ್ಯಾರು?; ವಿವರ ಇಲ್ಲಿದೆ
ದಾಳಿಗೊಳಗಾದ ಪತ್ರಕರ್ತರು (Photo:PTI)
ದಿಲ್ಲಿ: ಮಂಗಳವಾರ ಮುಂಜಾನೆ ದಿಲ್ಲಿ ಪೊಲೀಸರು ವಿವಿಧ ಪತ್ರಕರ್ತರು ಹಾಗೂ ರಾಜಕೀಯ ಟೀಕಾಕಾರರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಕಾಮಿಡಿಯನ್ ಹಾಗೂ ರಾಜಕೀಯ ವಿಡಂಬನಾಕಾರ ಸಂಜಯ್ ರಜೌರ, ಪತ್ರಕರ್ತರಾದ ಭಾಶಾ ಸಿಂಗ್ ಮತ್ತು ಪ್ರಬೀರ್ ಪುರ್ಕಾಯಸ್ತ ಹಾಗೂ ನ್ಯೂಸ್ ಕ್ಲಿಕ್ ನ ಅಭಿಸಾರ್ ಶರ್ಮ, ಇತಿಹಾಸಕಾರ ಹಾಗೂ ಹೋರಾಟಗಾರ ಸೊಹೈಲ್ ಹಶ್ಮಿ, ಲೇಖಕಿ ಗೀತಾ ಹರಿಹರನ್ ಹಾಗೂ ಹಿರಿಯ ಪತ್ರಕರ್ತರಾದ ಪರನ್ ಜೋಯ್ ಗುಹಾ ಥಾಕುರ್ತಾ, ಊರ್ಮಿಳೇಶ್ ಹಾಗೂ ಔನಿಂದ್ಯೋ ಚಕ್ರವರ್ತಿ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪತ್ರಕರ್ತ ಅಭಿಸಾರ್ ಶರ್ಮ, ಪೊಲೀಸರು ನನ್ನ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ಇತರರ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಗಳನ್ನೂ ವಶಪಡಿಸಿಕೊಂಡಿರುವ ಪೊಲೀಸರು, ಈ ಪೈಕಿ ಕೆಲವರನ್ನು ಪೊಲೀಸ್ ಠಾಣೆಗೂ ಕರೆದೊಯ್ದಿದ್ದಾರೆ. ಈ ಎಲ್ಲರೂ ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಈ ದಾಳಿಯು ನ್ಯೂಸ್ ಕ್ಲಿಕ್ ವಿರುದ್ಧ ದಾಖಲಾಗಿರುವ ಯುಎಪಿಎ ಪ್ರಕರಣದಡಿ ನಡೆದಿದೆ ಎಂದು India Today ಸುದ್ದಿ ಸಂಸ್ಥೆ ವರದಿ ಮಾಡಿದೆ.
The Wire ಸುದ್ದಿ ಸಂಸ್ಥೆಯ ಪ್ರಕಾರ, “ಉಗ್ರರೊಂದಿಗಿನ ಸಂಪರ್ಕದ” ಕುರಿತು ಪೊಲೀಸರು ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಅವರೆಲ್ಲರ ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಪರನ್ ಜೋಯ್ ಗುಹಾ ಥಾಕುರ್ತಾ ಅವರು ಗೌತಮ್ ಅದಾನಿ ಸೇರಿದಂತೆ ಹಲವಾರು ಪ್ರಭಾವಿ ವ್ಯಕ್ತಿಗಳ ವಿರುದ್ಧ ತನಿಖಾ ವರದಿಗಳನ್ನು ಮಾಡಿರುವ ಪತ್ರಕರ್ತರಾಗಿದ್ದು, ದೇಶಾದ್ಯಂತ ಹಲವಾರು ಮಾನ ಹಾನಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದಲ್ಲದೆ ವಿಜ್ಞಾನಿ ಹಾಗೂ ಲೇಖಕ ಡಿ.ರಘುನಂದನ್ ಅವರನ್ನೂ ಪೊಲೀಸರು ಕರೆದೊಯ್ದಿದ್ದಾರೆ ಎಂದೂ The Wire ಸುದ್ದಿ ಸಂಸ್ಥೆ ವರದಿ ಮಾಡಿದೆ.
ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯ ವಿರುದ್ಧ ಈಗಾಗಲೇ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದ್ದು, ಈ ಸಂಸ್ಥೆಯು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದೆ. 2021ಕ್ಕೂ ಹಿಂದೆ ತಮ್ಮ ಸಂಸ್ಥೆಗೆ ವಂಚಕ ಮಾರ್ಗಗಳ ಮೂಲಕ ವಿದೇಶಿ ನಿಧಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯ ಕಚೇರಿಗಳು ಹಾಗೂ ಅದರ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ತ ನಿವಾಸಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ನ್ಯೂಸ್ ಕ್ಲಿಕ್ ಸಂಸ್ಥೆಯು ಪಾವತಿ ಸುದ್ದಿಯನ್ನು ಪ್ರಕಟಿಸುವ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದು, ಅದಕ್ಕಾಗಿ ನಿಧಿಯನ್ನು ಪಡೆದಿದೆ ಎಂದು ಜಾರಿ ನಿರ್ದೇಶನಾಲಯವು ಈಗಲೂ ಆರೋಪಿಸುತ್ತಿದೆ.
2009ರಲ್ಲಿ ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯನ್ನು ಸ್ಥಾಪಿಸಿದ್ದ ಪ್ರಬೀರ್ ಪುರ್ಕಾಯಸ್ತ, ಅದರ ಪ್ರಧಾನ ಸಂಪಾದಕರೂ ಆಗಿದ್ದಾರೆ. ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯ ಮಾಲಕತ್ವವನ್ನು ಪಿಪಿಕೆ ನ್ಯೂಸ್ ಕ್ಲಿಕ್ ಸ್ಟುಡಿಯೊ ಪ್ರೈ. ಲಿ. ಹೊಂದಿದೆ. ನ್ಯೂಸ್ ಕ್ಲಿಕ್ ಸುದ್ದಿ ಸಂಸ್ಥೆಯನ್ನು ವಿದೇಶಿ ದೇಣಿಗೆದಾರರ ಪರವಾಗಿ ರಾಷ್ಟ್ರ ವಿರೋಧಿ ಸುದ್ದಿಗಳನ್ನು ಪ್ರಕಟಿಸಲು ಸ್ಥಾಪಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.