ಶ್ರೀಮಂತರಾಗುವ ಹಂಬಲ | ‘ಲಕ್ಕಿ ಭಾಸ್ಕರ್’ನಂತಾಗಲು ಹಾಸ್ಟೆಲ್ನಿಂದ ನಾಲ್ವರು ಹೈಸ್ಕೂಲ್ ವಿದ್ಯಾರ್ಥಿಗಳು ಪರಾರಿ
ದುಲ್ಕರ್ ಸಲ್ಮಾನ್ ಅಭಿನಯದ ತೆಲುಗು ಚಿತ್ರದ ಪ್ರಭಾವ!
PC: X
ಹೊಸದಿಲ್ಲಿ : ಇತ್ತೀಚೆಗೆ ತೆರೆಕಂಡ ದುಲ್ಕರ್ ಸಲ್ಮಾನ್ ಅಭಿನಯದ ತೆಲುಗು ಚಿತ್ರ ‘ಲಕ್ಕಿ ಭಾಸ್ಕರ್’ ನಿಂದ ಪ್ರಭಾವಿತರಾಗಿ 9ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಹಣಸಂಪಾದಿಸುವ ಹುಚ್ಚಿನಿಂದ ಹಾಸ್ಟೆಲ್ ತೊರೆದು ಪರಾರಿಯಾದ ಘಟನೆ ಗುರುವಾರ ಆಂಧ್ರದ ವಿಶಾಖಪಟ್ಟಣಂನಲ್ಲಿ ವರದಿಯಾಗಿದೆ.
ಈ ನಾಲ್ವರು ಶಾಲಾ ವಿದ್ಯಾರ್ಥಿಗಳು ಹಾಸ್ಟೆಲ್ನ ಗೇಟನ್ನು ಹತ್ತಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.ಲಕ್ಕಿ ಭಾಸ್ಕರ್ ಚಿತ್ರದ ನಾಯಕನಂತೆ ತಾವು ಕೂಡಾ ಸಾಕಷ್ಟು ಹಣವನ್ನು ಸಂಪಾದಿಸಿ, ದುಬಾರಿ ಕಾರುಗಳನ್ನು ಖರೀದಿಸಿದ ಆನಂತರ ಮರಳಿ ಬರುವುದಾಗಿ ಈ ನಾಲ್ವರು ವಿದ್ಯಾರ್ಥಿಗಳು ತಮ್ಮ ಸ್ನೇಹಿತಲ್ಲಿ ಹೇಳಿಕೊಂಡಿದ್ದರೆನ್ನಲಾಗಿದೆ.
ವಿದ್ಯಾರ್ಥಿಗಳು ಪರಾರಿಯಾಗಿರುವ ವಿಷಯವನ್ನು ಅವರ ಹೆತ್ತವರಿಗೆ ತಿಳಿಸಲಾಗಿದೆ. ಆನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಾಪತ್ತೆಯಾದ ವಿದ್ಯಾರ್ಥಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಲಕ್ಕಿ ಭಾಸ್ಕರ್ ಚಿತ್ರವು ಬ್ಯಾಂಕೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಎಂಬ ಮಧ್ಯಮವರ್ಗದ ವ್ಯಕ್ತಿಯ ಸುತ್ತ ಕೇಂದ್ರೀತವಾಗಿದೆ. ವ್ಯವಸ್ಥೆಯಲ್ಲಿ ಲೋಪಗಳನ್ನು ಅರಿತುಕೊಳ್ಳುವ ಆತ, ಕಪ್ಪುಹಣ ಬಿಳುಪುಗೊಳಿಸುವ ಅಪಾಯಕಾರಿ ಜಗತ್ತನ್ನು ಪ್ರವೇಶಿಸುವ ಕಥೆಯನ್ನು ಹೊಂದಿದೆ.
ವೆಂಕಿ ಅಟ್ಲೂರಿ ನಿರ್ದೇಶನದ ಸೂಪರ್ಹಿಟ್ ಚಿತ್ರ ಲಕ್ಕಿ ಭಾಸ್ಕರ್ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಮೀನಾಕ್ಷಿ ಚೌಧುರಿ ಪ್ರಮುಖ ಪಾತ್ರಗಳಲ್ಲಿದ್ದಾರೆ.