ದಿಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ದೇವೇಂದ್ರ ಯಾದವ್ ನೇಮಕ
PC : PTI
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಮಂಗಳವಾರ ಪಕ್ಷದ ಪಂಜಾಬ್ ಘಟಕದ ಅಧ್ಯಕ್ಷ ದೇವೇಂದ್ರ ಯಾದವ್ ರನ್ನು ದಿಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಮಧ್ಯಂತರ ಅಧ್ಯಕ್ಷರಾಗಿ ನೇಮಿಸಿದೆ.
ಅದೇ ವೇಳೆ, ಯಾದವ್ ಪಂಜಾಬ್ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿಯಾಗಿಯೂ ಮುಂದುವರಿಯುತ್ತಾರೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
ದಿಲ್ಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಹುದ್ದೆಗೆ ಅರ್ವಿಂದರ್ ಸಿಂಗ್ ಲವ್ಲಿ ರಾಜೀನಾಮೆ ನೀಡಿದ ಎರಡು ದಿನಗಳ ಬಳಿಕ ಈ ನೇಮಕಾತಿ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷ (ಆಪ್)ದೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಅರ್ವಿಂದರ್ ಸಿಂಗ್ ಲವ್ಲಿ ರವಿವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.
‘‘ಕಾಂಗ್ರೆಸ್ ಅಧ್ಯಕ್ಷರು ದಿಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಮಧ್ಯಂತರ ಅಧ್ಯಕ್ಷರಾಗಿ ದೇವೇಂದ್ರ ಯಾದವ್ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿದ್ದಾರೆ. ಅವರು ಪಂಜಾಬಿನಲ್ಲಿ ಎಐಸಿಸಿ ಉಸ್ತುವಾರಿಯಾಗಿ ಕೆಲಸ ನಿರ್ವಹಿಸುವುದನ್ನೂ ಮುಂದುವರಿಸಲಿದ್ದಾರೆ’’ ಎಂದು ಹೇಳಿಕೆಯೊಂದರಲ್ಲಿ ಕಾಂಗ್ರೆಸ್ ಪಕ್ಷ ತಿಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುವ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಲವ್ಲಿ ರಾಜೀನಾಮೆ ನೀಡಿದ್ದಾರೆ. ‘‘ಅಭ್ಯರ್ಥಿಗಳ ಹೆಸರುಗಳನ್ನು ಅಧಿಕೃತವಾಗಿ ಘೋಷಿಸುವ ಮೊದಲು, ಕನಿಷ್ಠ ಅನೌಪಚಾರಿಕವಾಗಿಯಾದರೂ ಪ್ರದೇಶ ಕಾಂಗ್ರೆಸ್ ಸಮಿತಿಗೆ ತಿಳಿಸಬೇಕು. ಆದರೆ, ಅವರು ಹಾಗೆ ಮಾಡಿಲ್ಲ’’ ಎಂದು ಲವ್ಲಿ ಹೇಳಿದ್ದಾರೆ.