ಮುಂದಿನ ಬಡ್ತಿಗಾಗಿ ಧನ್ಕರ್ ಸರಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ : ಖರ್ಗೆ ವಾಗ್ದಾಳಿ
Photo | PTI
ಹೊಸದಿಲ್ಲಿ: ತಮ್ಮ ಮುಂದಿನ ಬಡ್ತಿಗಾಗಿ ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ಸರಕಾರದ ವಕ್ತಾರರಾಗಿ ವರ್ತಿಸುತ್ತಿದ್ದಾರೆ ಎಂದು ಬುಧವಾರ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ನಿಯಮಗಳ ಬದಲಿಗೆ ರಾಜಕೀಯ ಮೇಲುಗೈ ಸಾಧಿಸಿರುವುದರಿಂದ ಮೇಲ್ಮನೆಯಲ್ಲಿ ಜಗದೀಪ್ ಧನ್ಕರ್ ಅವರೇ ಅತಿ ದೊಡ್ಡ ಅಡಚಣೆಗಾರರು ಎಂದು ಅವರು ಟೀಕಿಸಿದ್ದಾರೆ.
ಉಪ ರಾಷ್ಟ್ರಪತಿ ಹುದ್ದೆಯಿಂದ ಜಗದೀಪ್ ಧನ್ಕರ್ ಅವರನ್ನು ತೆಗೆದು ಹಾಕಬೇಕು ಎಂದು ಇಂಡಿಯಾ ಮೈತ್ರಿಕೂಟದ ಪಕ್ಷಗಳು ನೋಟಿಸ್ ನೀಡಿದ ಮರುದಿನವೇ, ತಾವೇಕೆ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂಬುದನ್ನು ವಿವರಿಸಲು ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್ ಜೆಡಿ, ಶಿವಸೇನೆ (ಯುಬಿಟಿ), ಜೆಎಂಎಂ, ಸಿಪಿ(ಐ)ಎಂ, ಸಿಪಿಐ ಹಾಗೂ ಎನ್ಸಿಪಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯಸಭಾ ಸ್ಪೀಕರ್ ಅವರ ಪಕ್ಷಪಾತೀಯ ಹಾಗೂ ಪಕ್ಷಭೇದದ ನಿಲುವು ಹಾಗೂ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮನುಷ್ಯ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳುವಂತಾಗಿರುವುದು ಬೇಸರದ ಸಂಗತಿ ಎಂದು ಖರ್ಗೆ ಹೇಳಿದರು. ಇಂತಹ ಯಾವ ಕ್ರಮಗಳೂ ಅವರು ಹೊಂದಿರುವ ಹುದ್ದೆಗೆ ಘನತೆ ತರುವುದಿಲ್ಲ. ವಿಶೇಷವಾಗಿ, ಅವರು ವಿಪಕ್ಷಗಳ ನಾಯಕರನ್ನು ತಮ್ಮ ವಿರೋಧಿಗಳಂತೆ ನೋಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
1952ರಿಂದ ಇಲ್ಲಿಯವರೆಗೆ ರಾಜ್ಯಸಭಾ ಸ್ಫೀಕರ್ ಆಗಿದ್ದ ಎಲ್ಲರೂ ನಿಷ್ಪಕ್ಷಪಾತಿಗಳಾಗಿದ್ದುದರಿಂದ ಇಂತಹ ಯಾವುದೇ ನಿರ್ಣಯಗಳನ್ನು ರಾಜ್ಯಸಭಾ ಸ್ಫೀಕರ್ ವಿರುದ್ಧ ಮಂಡಿಸಲಾಗಿರಲಿಲ್ಲ ರಾಜ್ಯಸಭಾಧ್ಯಕ್ಷರನ್ನು ತೆಗೆದು ಹಾಕಲು ನೀಡಿರುವ ನೋಟಿಸ್ ವೈಯಕ್ತಿಕ ಕುಂದುಕೊರತೆಗಳು ಅಥವಾ ರಾಜಕೀಯ ಕದನಕ್ಕಾಗಿಯಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆರ್ ಜೆಡಿಯ ಮನೋಜ್ ಝಾ, ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್, ಎನ್ಸಿಪಿ(ಎಸ್ಪಿ) ನಾಯಕ ಫೌಝಿಯ ಖಾನ್, ಸಿಪಿಐ(ಎಂ)ನ ಬಿಕಾಸ್ ರಂಜನ್ ಭಟ್ಟಾಚಾರ್ಯ ಹಾಗೂ ಜಾನ್ ಬ್ರಿಟ್ಟಾಸ್, ಸಿಪಿಐನ ಪಿ.ಸಂತೋಷ್ ಕುಮಾರ್, ಕೇರಳ ಕಾಂಗ್ರೆಸ್ (ಎಂ)ನ ಜೋಸ್ ಕೆ. ಮಣಿ ಹಾಗೂ ಜೆಎಂಎಂನ ಸರ್ಫರಾಝ್ ಅಹ್ಮದ್ ಸೇರಿದಂತೆ ಹಲವು ವಿಪಕ್ಷ ನಾಯಕರು ಹಾಜರಿದ್ದರು.