ಕೆನಡಾ RSS ಅನ್ನು ನಿಷೇಧಿಸಿದೆಯೆ?; ವೈರಲ್ ಆಗುತ್ತಿರುವ ವಿಡಿಯೋದ ವಾಸ್ತವಾಂಶ ಇಲ್ಲಿದೆ…
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ವನ್ನು ಕೆನಡಾದಲ್ಲಿ ನಿಷೇಧಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ನಿರ್ಧಾರವನ್ನು ಕೆನಡಾ ಸರ್ಕಾರ ಪ್ರಕಟಿಸಿದೆ ಎಂದು ಪ್ರತಿಪಾದಿಸಲಾಗುತ್ತಿದೆ.
ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿಡಾದುತ್ತಿದೆ.
ಸದ್ಯ ವೈರಲ್ ಆಗಿರುವ ವಿಡಿಯೊದಲ್ಲಿ ಎನ್ಸಿಸಿಎಂ ನಾಲ್ಕು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಅವುಗಳೆಂದರೆ:
► ಕೆನಡಾ ರಾಯಭಾರಿಯನ್ನು ತಕ್ಷಣವೇ ಭಾರತದಿಂದ ಹಿಂದಕ್ಕೆ ಕರೆಸಿಕೊಳ್ಳುವುದು.
►ಕೆನಡಾದಿಂದ ಭಾರತದ ರಾಯಭಾರಿಯನ್ನು ಉಚ್ಚಾಟಿಸುವುದು.
►ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸೀಮಿತವಲ್ಲದಂತೆ ಎರಡೂ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳನ್ನು ಅಮಾನತುಗೊಳಿಸುವುದು.
► ಆರೆಸ್ಸೆಸ್ ಅನ್ನು ನಿಷೇಧಿಸಿ, ಅವರ ಪ್ರತಿನಿಧಿಗಳನ್ನು ಕೆನಡಾದಿಂದ ಹೊರದಬ್ಬುವುದು.
ವಾಸ್ತವಾಂಶವೇನು?:
ಕೆನಡಾ ಸರ್ಕಾರವು ಆರೆಸ್ಸೆಸ್ ಅನ್ನು ನಿಷೇಧಿಸಿಯೂ ಇಲ್ಲ ಅಥವಾ ನ್ಯಾಶನಲ್ ಕೌನ್ಸಿಲ್ ಆಫ್ ಕೆನಡಿಯನ್ ಮುಸ್ಲಿಂ ಸಿಇಒ ಸ್ಟೀಫನ್ ಬ್ರೌನ್ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿಯೂ ಇಲ್ಲ ಎಂದು thequint.com ಸತ್ಯಶೋಧನಾ ವೇದಿಕೆಯು ದೃಢಪಡಿಸಿದೆ.
ಎನ್ಸಿಸಿಎಂ ಯೂಟ್ಯೂಬ್ ಖಾತೆಯನ್ನು ಪತ್ತೆ ಹಚ್ಚಿದ thequint.com ಸತ್ಯಶೋಧನಾ ವೇದಿಕೆಯು ಈ ಖಾತೆಯು ವೈರಲ್ ಆಗಿರುವ ವಿಡಿಯೊದ ವಿಸ್ತೃತ ಸ್ವರೂಪವನ್ನು ಹೊಂದಿತ್ತು ಹಾಗೂ ಎನ್ಸಿಸಿಎಂ ನ ಸಿಇಒ ಸ್ಟೀಫನ್ ಬ್ರೌನ್ ಅವರು ಎನ್ಸಿಸಿಎಂ ಹಾಗೂ ವರ್ಲ್ಡ್ ಸಿಖ್ ಆರ್ಗನೈಸೇಷನ್ ಆಫ್ ಕೆನಡಾ ಜಂಟಿಯಾಗಿ ಆಯೋಜಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿರುವುದು ಕಂಡು ಬಂದಿದೆ.
ಈ ವಿಡಿಯೊವನ್ನು ಸೆಪ್ಟೆಂಬರ್ 21ರಂದು ಹಂಚಿಕೊಳ್ಳಲಾಗಿದೆ.
ಈ ವಿಡಿಯೊದಲ್ಲಿ ಸ್ಟೀಫನ್ ಬ್ರೌನ್ ನಾಲ್ಕು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. (ಅದನ್ನು ಮೇಲೆ ನೀಡಲಾಗಿದೆ).
ಈ ದೃಶ್ಯಾವಳಿಯು ಎನ್ಸಿಸಿಎಂ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅಪ್ಲೋಡ್ ಆಗಿದೆ.
ಈ ವೈರಲ್ ವಿಡಿಯೊವು ಎನ್ಸಿಸಿಎಂನ ಟಿಕ್ ಟಾಕ್ ಖಾತೆಯ ವಾಟರ್ ಮಾರ್ಕ್ ಆದ @nccmuslims ಅನ್ನೂ ಹೊಂದಿದೆ.
ಸೆಪ್ಟೆಂಬರ್ 20ರಂದು ಈ ಭಾಷಣವನ್ನು ಸ್ಟೀಫನ್ ಬ್ರೌನ್ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಮೇಲಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.
ಅಲ್ಲದೆ thequint.com ಸತ್ಯಶೋಧನಾ ವೇದಿಕೆಯು ಅದರ ಅಧಿಕೃತ ಅಂತರ್ಜಾಲ ತಾಣವನ್ನು ಪರಿಶೀಲಿಸಿದಾಗ ಆ ಸಂಸ್ಥೆಯು ಕೆನಡಾ ಸರ್ಕಾರದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿ ಕೆನಡಾದಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸಲಾಗಿದೆ ಎಂಬುದು ಸುಳ್ಳು ಸುದ್ದಿ ಎಂದು thequint.com ಸತ್ಯಶೋಧನಾ ವೇದಿಕೆ ಬಯಲು ಮಾಡಿದೆ.