“ನೀವೇನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದೀರಾ?” | ಅಂಬಾನಿ, ಅದಾನಿ ಬಗ್ಗೆ ರಾಹುಲ್ ಮೌನವನ್ನು ಪ್ರಶ್ನಿಸಿದ ಪ್ರಧಾನಿ ಮೋದಿ
Photo: ndtv
ಹೈದರಾಬಾದ್: ತೆಲಂಗಾಣದಲ್ಲಿ ಬುಧವಾರ ನಡೆದ ರ್ಯಾಲಿಯಲ್ಲಿ ಕೈಗಾರಿಕೋದ್ಯಮಿಗಳಾದ ಅಂಬಾನಿ ಮತ್ತು ಅದಾನಿ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಮೌನವಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಅವರ ಈ ಮೌನವು ಕಾಂಗ್ರೆಸ್ ಮತ್ತು ಈ ಕೈಗಾರಿಕೋದ್ಯಮಿಗಳ ನಡುವಿನ "ರಹಸ್ಯ ಒಪ್ಪಂದ" ವನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಕಳೆದ ಐದು ವರ್ಷಗಳಿಂದ ಅಂಬಾನಿ ಮತ್ತು ಅದಾನಿಯನ್ನು ರಾಹುಲ್ ಗಾಂಧಿ ನಿರಂತರವಾಗಿ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು ಎಂದು ಮೋದಿ ಗಮನಸೆಳೆದರು. ವಿಶೇಷವಾಗಿ ಸರ್ಕಾರದೊಂದಿಗಿನ ಅವರ ಸಂಪರ್ಕಗಳ ಮೇಲೆ ರಾಹುಲ್ ಮಾತನಾಡುತ್ತಿದ್ದರು. ಆದರೆ, ಚುನಾವಣೆ ಘೋಷಣೆಯಾದ ನಂತರ ರಾಹುಲ್ ಭಾಷಣದಲ್ಲಿ ಬದಲಾವಣೆಯಾಗಿದೆ. ಈಗ ಅಂಬಾನಿ – ಅದಾನಿ ಟೀಕಿಸುವುದನ್ನು ರಾಹುಲ್ ನಿಲ್ಲಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
“ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ರಾಜಕುಮಾರ ಇದನ್ನು ಪುನರಾವರ್ತಿಸುತ್ತಿರುವುದನ್ನು ನೀವು ನೋಡಿದ್ದೀರಿ. ರಫೇಲ್ ಯುದ್ಧ ವಿಮಾನಗಳ ಕುರಿತ ಅವರು ಆರೋಪವು ಟೊಳ್ಳಾದ ಮೇಲೆ, ಅವರು ಮೊದಲು ಕೈಗಾರಿಕೋದ್ಯಮಿಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ನಂತರ ಅಂಬಾನಿ-ಅದಾನಿ, ಅಂಬಾನಿ-ಅದಾನಿ, ಅಂಬಾನಿ-ಅದಾನಿಗಳ ಬಗ್ಗೆ ಮಾತನಾಡಿದರು. ಆದರೆ ಅಚ್ಚರಿಯೆಂಬಂತೆ ಚುನಾವಣೆ ಘೋಷಣೆಯಾದ ನಂತರ ಅವರು ಈ ಇಬ್ಬರನ್ನು ನಿಂದಿಸುವುದನ್ನು ಬಿಟ್ಟಿದ್ದಾರೆ. ನಾನು ತೆಲಂಗಾಣದ ಸಾರ್ವಜನಿಕ ಮುಂದೆ ಕೇಳಲು ಬಯಸುತ್ತೇನೆ, ರಾಜಕುಮಾರರೇ ಘೋಷಿಸಬೇಕು, ಅವರು ಅಂಬಾನಿ-ಅದಾನಿಯಿಂದ ಎಷ್ಟು ತೆಗೆದುಕೊಂಡಿದ್ದಾರೆ? ಎಷ್ಟು ಕಪ್ಪುಹಣ ತೆಗೆದುಕೊಂಡಿದ್ದಾರೆ? ಹಣ ತುಂಬಿದ ಟೆಂಪೋಗಳು ಕಾಂಗ್ರೆಸ್ಗೆ ತಲುಪಿವೆಯೇ? ಆಗಿರುವ ಒಪ್ಪಂದ ಯಾವುದು? ರಾತ್ರೋರಾತ್ರಿ ಅಂಬಾನಿ-ಅದಾನಿಯನ್ನು ನಿಂದಿಸುವುದನ್ನು ನಿಲ್ಲಿಸಿದ್ದೇಕೆ? ಖಂಡಿತವಾಗಿಯೂ ಏನೋ ನಡೆದಿದೆ”ಎಂದು ಅವರು ಪ್ರಧಾನಿ ಮೋದಿ ತೆಲಂಗಾಣದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ನ ಪ್ರವೀಣ್ ಚಕ್ರವರ್ತಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. “ಮೋದಿಯವರ ಹೇಳಿಕೆಗಳು ಸರ್ಕಾರ ಮತ್ತು ಅಂಬಾನಿ-ಅಂಬಾನಿ ನಡುವಿನ ಸಂಬಂಧವನ್ನು ರಾಹುಲ್ ಗಾಂಧಿಯವರು ಬಹಿರಂಗಪಡಿಸುವುದರೊಂದಿಗೆ ಅವರಿಗಿರುವ ಅಸಮಾಧಾನವನ್ನು ಸೂಚಿಸುತ್ತವೆ. ಸಾಮಾನ್ಯ ಜನರು ಮತ್ತು ರಾಷ್ಟ್ರದ ಹಿತಾಸಕ್ತಿಗಿಂತ ಈ ಕೈಗಾರಿಕೋದ್ಯಮಿಗಳ ಹಿತಾಸಕ್ತಿಯೇ ಮುಖ್ಯವಾಗಿದೆ” ಎಂದು ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಮೂರನೆ ಹಂತದ ಸಾರ್ವತ್ರಿಕ ಚುನಾವಣೆಯ ನಂತರ ಕಾಂಗ್ರೆಸ್ ಹಾಗೂ ಅದರ ಇಂಡಿ ಮೈತ್ರಿಕೂಟದ ಮೂರನೆಯ ಫ್ಯೂಸ್ ಸುಟ್ಟು ಹೋಗಿದೆ ಎಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.
ಇನ್ನೂ ನಾಲ್ಕು ಹಂತದ ಮತದಾನ ಬಾಕಿಯಿದ್ದು, ಜನರ ಆಶೀರ್ವಾದದಿಂದ ಬಿಜೆಪಿ ಹಾಗೂ ಎನ್ಡಿಎಯು ವಿಜಯದತ್ತ ಧಾವಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಬಿಆರ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಬಿಜೆಪಿಗೆ ದೇಶ ಮೊದಲಾಗಿದ್ದರೆ, ಕಾಂಗ್ರೆಸ್ ಹಾಗೂ ಬಿಆರ್ಎಸ್ ಪಕ್ಷಗಳಿಗೆ ಕುಟುಂಬ ಮೊದಲು ಎಂದು ಕಟಕಿಯಾಡಿದರು.
ಭ್ರಷ್ಟಾಚಾರದ ಬಗ್ಗೆ ಬಿಆರ್ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಬಹಿರಂಗವಾಗಿ ಟೀಕೆ ಮಾಡಿಕೊಂಡರೂ, ಈ ಎರಡೂ ಪಕ್ಷಗಳ ನಡುವೆ ಇದು ಸಾಮಾನ್ಯ ಸಂಗತಿಯಾಗಿದೆ ಎಂದೂ ಅವರು ಟೀಕಿಸಿದರು.