ಬಿಜೆಪಿಗೆ ಸೇರ್ಪಡೆ ವದಂತಿ ಕುರಿತು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಹೇಳಿದ್ದೇನು?
Photo: PTI
ಹೊಸದಿಲ್ಲಿ: ತಾನು ಬಿಜೆಪಿಗೆ ಸೇರಬಹುದು ಎಂಬ ವದಂತಿಗಳ ನಡುವೆಯೇ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರು,ತಾನು ಯಾರೊಂದಿಗೂ ಮಾತನಾಡಿಲ್ಲ ಎಂದು ರವಿವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕಮಲನಾಥ್, ‘ಅಂತಹುದೇನಾದರೂ ಇದ್ದರೆ ನಿಮಗೆಲ್ಲ ತಿಳಿಸುತ್ತೇನೆ ಎಂದು ನಾನು ನಿನ್ನೆ ಹೇಳಿದ್ದೆ. ನಾನು ಯಾರೊಂದಿಗೂ ಮಾತನಾಡಿಲ್ಲ’ ಎಂದು ಹೇಳಿದರು.
ತಾನು ಮತ್ತು ತನ್ನ ಪುತ್ರ ನಕುಲನಾಥ ಬಿಜೆಪಿಗೆ ಸೇರಲಿದ್ದೇವೆ ಎಂಬ ವದಂತಿಗಳಿಗೆ ಶನಿವಾರ ಪ್ರತಿಕ್ರಿಯಿಸಿದ್ದ ಕಮಲನಾಥ್, ಅಂತಹುದೇನಾದರೂ ಸಂಭವಿಸಿದರೆ ಮಾಧ್ಯಮಗಳಿಗೆ ತಿಳಿಸುವುದಾಗಿ ಹೇಳಿದ್ದರು. ಹೆಚ್ಚಿನ ಆತುರ ಬೇಡ ಎಂದು ಅವರು ಸುದ್ದಿಗಾರರಿಗೆ ಕಿವಿಮಾತನ್ನೂ ಹೇಳಿದ್ದರು.
ಶನಿವಾರ ಕಮಲನಾಥರ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಬಿಜೆಪಿ ವಕ್ತಾರ ನರೇಂದ್ರ ಸಲೂಜಾ ಅವರು ಭೋಪಾಲದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಅವರ ಪುತ್ರ ಜೊತೆಯಲ್ಲಿದ್ದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ‘ಜೈ ಶ್ರೀರಾಮ’ ಎಂಬ ಅಡಿಬರಹವನ್ನು ನೀಡಿದ್ದರು. ಇದು ಕಮಲನಾಥ್ ಬಿಜೆಪಿಗೆ ಸೇರ್ಪಡೆಗೊಳ್ಳಬಹುದು ಎಂಬ ಊಹಾಪೋಹಗಳನ್ನು ಇನ್ನಷ್ಟು ತೀವ್ರಗೊಳಿಸಿತ್ತು.
ಶನಿವಾರ ಕಮಲನಾಥ ಪುತ್ರ, ಛಿಂದ್ವಾರಾದ ಕಾಂಗ್ರೆಸ್ ಸಂಸದ ನಕುಲನಾಥ್ ಅವರು ಎಕ್ಸ್ ನಲ್ಲಿ ತನ್ನ ಪ್ರೊಫೈಲ್ ನಲ್ಲಿ ಯ ‘ಕಾಂಗ್ರೆಸ್’ ಪದವನ್ನು ತೆಗೆದುಹಾಕಿದ್ದರು.