ಡಿಐಜಿ ಪತ್ನಿಯಿಂದ ಚಿತ್ರಹಿಂಸೆ ಆರೋಪ: ಆತ್ಮಹತ್ಯೆಗೆ ಯತ್ನಿಸಿ ಎರಡೂ ಕಾಲು ಕಳೆದುಕೊಂಡ ಮಹಿಳಾ ಹೋಮ್ ಗಾರ್ಡ್
ಭುವನೇಶ್ವರ: ಹಿರಿಯ ಐಪಿಎಸ್ ಅಧಿಕಾರಿಯ ಮನೆಯಲ್ಲಿ ನಿಯೋಜಿತರಾಗಿದ್ದ ಮಹಿಳಾ ಹೋಮ್ ಗಾರ್ಡ್ ಒಬ್ಬರು, ಅಧಿಕಾರಿಯ ಪತ್ನಿ ನೀಡಿದ ಚಿತ್ರಹಿಂಸೆಯಿಂದ ಬೇಸತ್ತು ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಡಿಐಜಿ ಶ್ರೇಣಿಯ ಅಧಿಕಾರಿ ಬ್ರಿಜೇಶ್ ರಾಯ್ ಅವರನ್ನು ಒಡಿಶಾ ಸರ್ಕಾರ ವರ್ಗಾವಣೆ ಮಾಡಿದೆ.
ರಾಯ್ ಅವರ ಅಂಗೂಲ್ ನಿವಾಸದಲ್ಲಿ ಕರ್ತವ್ಯದಲ್ಲಿದ್ದ 47 ವರ್ಷ ವಯಸ್ಸಿನ ಮಹಿಳಾ ಹೋಮ್ ಗಾರ್ಡ್ ಆತ್ಮಹತ್ಯೆಗೆ ಯತ್ನಿಸಿ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ತೆ ಸೈರೀಂದ್ರಿ ಸಾಹು ವಿಧವೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರಿಜೇಶ್ ರಾಯ್ ಮನೆಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸಾಹು ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದು, ಅಧಿಕಾರಿ ಪತ್ನಿ ಏಳು ತಿಂಗಳಿಂದ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಎಲ್ಲ ಗೃಹಕೃತ್ಯಗಳನ್ನು ನಿಭಾಯಿಸಿದರೂ ಸಣ್ಣ ಪುಟ್ಟ ತಪ್ಪುಗಳಿಗೂ ನಿಂದಿಸುತ್ತಿದ್ದರು ಎಂದು ದೂರಲಾಗಿದೆ.
"ಈ ಘಟನೆ ನಡೆದ ಮರುದಿನ ಅಂದರೆ ಆಗಸ್ಟ್ 4ರಂದು ಡಿಐಜಿ ಪತ್ನಿ ಬಟ್ಟೆ ತೊಳೆಯುವಂತೆ ಸೂಚಿಸಿದ್ದರು. ಆದರೆ ಕಾಲಿಗೆ ಗಾಯವಾಗಿರುವುದರಿಂದ ಸಾಧ್ಯವಿಲ್ಲ ಎಂದು ನಿರಾಕರಿಸಿದೆ. ಇದಾದ ಬಳಿಕ ದೈಹಿಕ ಹಿಂಸೆ ನೀಡಿ, ಕೆಲಸದಿಂದ ವಜಾಗೊಳಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ" ಎಂದು ದೂರಿನಲ್ಲಿ ವಿವರಿಸಲಾಗಿದೆ.
"ತೀರಾ ಮಾನಸಿಕ ಒತ್ತಡಕ್ಕೆ ಒಳಗಾಗಿ ಪಕ್ಕದ ರೈಲ್ವೆ ಹಳಿಗೆ ತೆರಳಿ, ಆತ್ಮಹತ್ಯೆಗೆ ಪ್ರಯತ್ನಿಸಿದೆ. ಟ್ರ್ಯಾಕ್ನಲ್ಲಿ ನಿಂತಿದ್ದಾಗ ರೈಲು ಸನಿಹದಲ್ಲೇ ಬರುತ್ತಿದ್ದಾಗ ಆದ ಕಂಪನದಿಂದ ಟ್ರ್ಯಾಕ್ ನ ಹೊರಗೆ ಬಿದ್ದೆ. ಆದರೂ ವೇಗವಾಗಿ ಬರುತ್ತಿದ್ದ ರೈಲಿನ ಅಡಿ ಕಾಲುಗಳು ನುಜ್ಜುಗುಜ್ಜಾದವು. ಪ್ರಜ್ಞೆ ಮರುಕಳಿಸಿದಾಗ, ನಾನು ಕಟಕ್ ನ ಖಾಸಗಿ ಆಸ್ಪತ್ರೆಯಲ್ಲಿದ್ದೆ" ಎಂದು ಹೇಳಿದ್ದಾರೆ.
ಈ ಸುದ್ದಿ ಹರಡುತ್ತಿದ್ದಂತೇ ಗೃಹ ಇಲಾಖೆ, ಅಂಗೂಲ್ ನಲ್ಲಿ ಉತ್ತರ ಕೇಂದ್ರ ವಿಭಾಗದ ಡಿಐಜಿ ಆಗಿದ್ದ ರಾಯ್ ಅವರನ್ನು ವರ್ಗಾವಣೆ ಮಾಡಿದೆ. ಇದೀಗ 2009ನೇ ಬ್ಯಾಚ್ ಅಧಿಕಾರಿ ರಾಜ್ಯ ಪೊಲೀಸ್ ಕೇಂದ್ರ ಕಚೇರಿಗೆ ವರ್ಗಾವಣೆಯಾಗಿದ್ದಾರೆ.
ದೂರು ಸ್ವೀಕರಿಸಿದ್ದನ್ನು ದೃಢಪಡಿಸಿರುವ ಹೋಮ್ ಗಾರ್ಡ್ ಡಿಜಿ ಸುಧಾಂಶು ಸಾರಂಗಿ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಂಗೂಲ್ ಎಸ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.