ʼದಿಲ್ಲಿ ಚಲೋʼಗೆ ತಡೆ | ರೈತರನ್ನು ಚದುರಿಸಲು ಅಶ್ರುವಾಯು ಶೆಲ್ ಪ್ರಯೋಗ
PC: x.com/EconomicTimes
ಚಂಡೀಗಢ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದಿಲ್ಲಿ ಚಲೋ ನಡೆಸುತ್ತಿದ್ದ 101 ರೈತರ ಗುಂಪನ್ನು ತಡೆಯಲು ಪೊಲೀಸರು ಶಂಭು ಗಡಿಯಲ್ಲಿ ಅಶ್ರುವಾಯು ಶೆಲ್ ಪ್ರಯೋಗ ಮಾಡಿದ್ದಾರೆ.
ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಜಾರಿ ಮಾಡಿದೆ. ‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನೀವು ಮುಂದುವರಿಯಬೇಡಿ ಎಂದು ಹರಿಯಾಣ ಪೊಲೀಸರು ರೈತರಿಗೆ ಹೇಳಿದ್ದಾರೆ. ರೈತರನ್ನು ತಡೆಯಲು ಬ್ಯಾರಿಕೇಡ್ಗಳನ್ನು, ಕಬ್ಬಿಣದ ಮೆಶ್ಗಳನ್ನು ಅಳವಡಿಸಲಾಗಿದೆ.
ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಿಂದ ರವಿವಾರ ಮಧ್ಯಾಹ್ನ 12 ಗಂಟೆಗೆ ದಿಲ್ಲಿಯತ್ತ ಮೆರವಣಿಗೆ ಹೊರಟಿದ್ದರು. ಆದರೆ ಪಾದಯಾತ್ರೆ ಪಾದಯಾತ್ರೆ ಕೈಗೊಳ್ಳಲು ಅಗತ್ಯವಿರುವ ಅನುಮತಿ ಪತ್ರ ತೋರಿಸುವಂತೆ ಹರಿಯಾಣ ಪೊಲೀಸರು ರೈತರನ್ನು ಕೇಳಿದ್ದಾರೆ.
ಗುರುತಿನ ಚೀಟಿ ನೀಡಲು ನಿರಾಕರಿಸಿದ ರೈತರು ಬ್ಯಾರಿಗೇಡ್ಗಳನ್ನು ತಳ್ಳಿ ಮುನ್ನುಗ್ಗಲು ಯತ್ನಿಸಿದ್ದಾರೆ. ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಗುರುತಿನ ಚೀಟಿ ನೀಡುವಂತೆ ಕೇಳುತ್ತಿದ್ದಾರೆ. ಗುರುತಿನ ಚೀಟಿಗಳನ್ನು ಏಕೆ ನೀಡಬೇಕು. ನಾವು ಗುರುತಿನ ಚೀಟಿಗಳನ್ನು ನೀಡುತ್ತೇವೆ. ಆದರೆ ಅವರು ನಮಗೆ ದಿಲ್ಲಿಗೆ ಹೋಗಲು ಅನುಮತಿ ನೀಡಬೇಕು ಎಂದು ಪ್ರತಿಭಟನಾನಿರತ ರೈತರೊಬ್ಬರು ಹೇಳಿದ್ದಾರೆ.
ನಮ್ಮ ಬಳಿ 101 ರೈತರ ಹೆಸರುಗಳ ಪಟ್ಟಿ ಇದೆ. ಅವರನ್ನು ಗುರುತಿಸಿದ ಬಳಿಕ ನಾವು ಮುಂದುವರಿಯಲು ಅವಕಾಶ ನೀಡಬಹುದು. ಆದರೆ ಅವರು ಗುರುತಿನ ಚೀಟಿ ನೀಡುತ್ತಿಲ್ಲ ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.