ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು: ಮಾಲ್ದೀವ್ಸ್ ನಾಗರಿಕರೇಕೆ ತಮ್ಮ ಆರೋಗ್ಯದ ಕುರಿತು ಕಳವಳಗೊಂಡಿದ್ದಾರೆ?
Photo: indiatoday.in
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾರ್ಪಡಿಸಲು ಮುಂದಡಿ ಇಟ್ಟಕೂಡಲೇ ಭಾರತದ ವಿರುದ್ಧ ಕೆಲವು ಮಾಲ್ದೀವ್ಸ್ ಸಚಿವರು ನಕಾರಾತ್ಮಕ ಹೇಳಿಕೆಗಳನ್ನು ನೀಡಿದ್ದು, ಇದರ ಬೆನ್ನಿಗೇ ಸೃಷ್ಟಿಯಾದ ಆನ್ ಲೈನ್ ತಿಕ್ಕಾಟವು, ಇದೀಗ ಭಾರತ ಮತ್ತು ಮಾಲ್ದೀವ್ಸ್ ನಡುವೆ ಪೂರ್ಣಪ್ರಮಾಣದ ರಾಜತಾಂತ್ರಿಕ ಬಿಕ್ಕಟ್ಟಾಗಿ ಪರಿವರ್ತನೆಗೊಂಡಿದೆ. ಇದರ ಬೆನ್ನಿಗೇ ಭಾರತೀಯರು ಮಾಲ್ದೀವ್ಸ್ ಪ್ರವಾಸೋದ್ಯಮವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡುತ್ತಿದ್ದು, ಭಾರತ ಸರ್ಕಾರ ಕೂಡಾ ಈ ವಿಷಯವನ್ನು ಮಾಲ್ದೀವ್ಸ್ ಸರ್ಕಾರದೊಂದಿಗೆ ಚರ್ಚಿಸಿದೆ.
ಮುಜುಗರವನ್ನುಂಟು ಮಾಡುವ ಹೇಳಿಕೆ ನೀಡಿದ್ದ ಮೂವರು ಸಚಿವರನ್ನು ಮಾಲ್ದೀವ್ಸ್ ಸರ್ಕಾರವು ತೆಗೆದು ಹಾಕಿದ್ದರೂ, ಈ ಘಟನೆಯಿಂದ ಮಾಲ್ದೀವ್ಸ್ ದ್ವೀಪದ ನಾಗರಿಕರನ್ನು ಕಳವಳಕ್ಕೆ ದೂಡಿದೆ. ಭಾರತೀಯರೇ ಮಾಲ್ದೀವ್ಸ್ ಅನ್ನು ಗಮನಾರ್ಹ ಪ್ರವಾಸೋದ್ಯಮ ಆಧರಿತ ಆರ್ಥಿಕತೆಯನ್ನಾಗಿಸಿದ್ದರೆ, ಮಾಲ್ದೀವ್ಸ್ ನಾಗರಿಕರ ಪಾಲಿಗೆ ಭಾರತವು ಬಹು ಬೇಡಿಕೆಯ ಆರೋಗ್ಯ ಪ್ರವಾಸೋದ್ಯಮವಾಗಿದೆ.
ಭಾರತದಂಥ ಪ್ರಮುಖ ನೆರೆ ರಾಷ್ಟ್ರದೊಂದಿಗಿನ ಸಂಬಂಧವನ್ನು ಹದಗೆಡಿಸಿರುವ ಸಚಿವರನ್ನು ಹಲವಾರು ಮಾಲ್ದೀವ್ಸ್ ನಾಗರಿಕರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೈಕಿ ಕೆಲವರು ತಮ್ಮ ಮುಂಬರುವ ಆರೋಗ್ಯ ಪ್ರವಾಸೋದ್ಯಮದ ಕುರಿತೂ ಕಳವಳ ವ್ಯಕ್ತಪಡಿಸಿದ್ದಾರೆ.
“ನನ್ನ ಎಲ್ಲ ಭಾರತೀಯ ಸ್ನೇಹಿತರಲ್ಲಿ ಕ್ಷಮೆ ಕೋರುತ್ತೇನೆ ಹಾಗೂ ಈಗಾಗಲೇ ಭಾರತಕ್ಕೆ ಕಾಯ್ದಿರಿಸಿರುವ ನನ್ನ ಕುಟುಂಬದ ಆರೋಗ್ಯ ಪ್ರವಾಸದ ಕುರಿತು ಚಿಂತೆಗೀಡಾಗಿದ್ದೇನೆ” ಎಂದು ಬಳಕೆದಾರರೊಬ್ಬರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
“ನಿಮ್ಮಲ್ಲಿ ಕೆಲವರು ಶ್ರೀಮಂತರಾಗಿರುವುದರಿಂದ ನೀವು ಸಿಂಗಾಪುರ ಅಥವಾ ಇನ್ನಾವುದೇ ದೇಶಗಳಿಗೆ ಆರೋಗ್ಯ ಸಮಸ್ಯೆಗಳಿಗಾಗಿ ವಿಮಾನವೇರಿ ಹಾರಿ ಹೋಗುವ ಸೌಲಭ್ಯವನ್ನು ಪಡೆದಿದ್ದೀರಿ. ಇದರರ್ಥ ನಾವೂ ಕೂಡಾ ಅಂತಹ ಸೌಲಭ್ಯ ಹೊಂದಿದ್ದೇವೆ ಎಂದಲ್ಲ” ಎಂದು ಮತ್ತೊಬ್ಬ ಬಳಕೆದಾರರು ಕಿಡಿ ಕಾರಿದ್ದಾರೆ.
ಆದರೆ, ಮಾಲ್ದೀವ್ಸ್ ನಾಗರಿಕರು ತಮ್ಮ ಆರೋಗ್ಯ ಸಮಸ್ಯೆಗಳಿಗಾಗಿ ಭಾರತದ ಮೇಲೆ ಅದೆಷ್ಟು ಅವಲಂಬಿತರಾಗಿದ್ದಾರೆ? ಒಮ್ಮೆ ನೋಡೋಣ.
ವೈದ್ಯಕೀಯ ನೆರವಿಗಾಗಿ ಭಾರತವನ್ನೇ ಅವಲಂಬಿಸಿರುವ ಮಾಲ್ದೀವ್ಸ್
ಮಾಲ್ದೀವ್ಸ್ ನಾಗರಿಕರ ಆರೋಗ್ಯ ಸೇವಾ ವ್ಯವಸ್ಥೆಯು ತಮ್ಮ ಭೌಗೋಳಿಕ ವಿಶಿಷ್ಟತೆಗೆ ಹೊಂದಿಕೊಳ್ಳುವಂತೆ ರೂಪುಗೊಂಡಿದೆ. ಈ ದ್ವೀಪ ರಾಷ್ಟ್ರವು ಸುಮಾರು 3.3 ಲಕ್ಷ ಮೂಲನಿವಾಸಿ ಜನಸಂಖ್ಯೆಯನ್ನು ಹೊಂದಿದ್ದು, ಈ ಜನಸಂಖ್ಯೆಯು 198 ಪುಟ್ಟ ದ್ವೀಪಗಳಲ್ಲಿ ಹಂಚಿ ಹೋಗಿದೆ. ಈ ಪೈಕಿ ನಾಲ್ಕು ದ್ವೀಪಗಳಲ್ಲಿ ಮಾತ್ರ 5,000ಕ್ಕೂ ಹೆಚ್ಚು ಜನಸಂಖ್ಯೆ ಇದ್ದರೆ, 72 ದ್ವೀಪಗಳಲ್ಲಿ 500ಕ್ಕೂ ಕಡಿಮೆ ಜನಸಂಖ್ಯೆ ಇದೆ.
ಜನಸಮುದಾಯವಿರುವ ಎಲ್ಲ ದ್ವೀಪಗಳಲ್ಲೂ ತಲಾ ಒಂದೊಂದು ಪ್ರಾಥಮಿಕ ಆರೋಗ್ಯ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಹತ್ತು ದ್ವೀಪಗಳನ್ನು ಒಂದುಗೂಡಿಸಿ ಒಂದು ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಇಂತಹ 21 ಆಸ್ಪತ್ರೆಗಳು ಎರಡನೆಯ ಹಂತದ ಆರೋಗ್ಯ ಸೇವೆಯನ್ನು ಒದಗಿಸುತ್ತಿವೆ. ಇವುಗಳೊಂದಿಗೆ ಆರು ಪ್ರಾಂತೀಯ ಆಸ್ಪತ್ರೆಗಳು ಮೂರು ಅಥವಾ ನಾಲ್ಕು ಒಟ್ಟುಗೂಡಿಸಿದ ಆಸ್ಪತ್ರೆಗಳಿಗೆ ಸೇವೆ ಒದಗಿಸುತ್ತವೆ. ಸುಧಾರಿತ ಚಿಕಿತ್ಸೆಗಾಗಿ ಇಲ್ಲಿನ ನಾಗರಿಕರು ರಾಜಧಾನಿ ಮಾಲೆಗೆ ಹೋಗಬೇಕಾಗುತ್ತದೆ.
ಆದರೆ, ವಿಶೇಷ ವೈದ್ಯಕೀಯ ಚಿಕಿತ್ಸೆಯ ವಿಚಾರಕ್ಕೆ ಬಂದಾಗ, ಈ ದ್ವೀಪ ರಾಷ್ಟ್ರದಲ್ಲಿ ಲಭ್ಯವಿಲ್ಲ ಅಥವಾ ಅವರ ತವರು ದೇಶದಲ್ಲಿ ಸೀಮಿತ ಸಂಖ್ಯೆಯಲ್ಲಿದೆ. ಹೀಗಾಗಿ ಮಾಲ್ದೀವ್ಸ್ ನಾಗರಿಕರ ಆದ್ಯತೆಯ ತಾಣ ಭಾರತವಾಗಿದೆ.
2015ರ ಭಾರತೀಯ ವೈದ್ಯಕೀಯ ಪ್ರವಾಸೋದ್ಯಮ ಮುನ್ನೋಟ ವರದಿಯ ಪ್ರಕಾರ, ಭಾರತದಿಂದ ಆರೋಗ್ಯ ಸೇವೆಯನ್ನು ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಮಾಲ್ದೀವ್ಸ್ ಮೊದಲ ಸ್ಥಾನದಲ್ಲಿದೆ. 2021ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ ಜನರ ಪೈಕಿ ಮೂರನೆ ದೊಡ್ಡ ಜನಸಂಖ್ಯೆ ಮಾಲ್ದೀವ್ಸ್ ನಾಗರಿಕರದ್ದಾಗಿತ್ತು ಎಂದು ಆಗಸ್ಟ್ 2022ರಲ್ಲಿ ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಭಾರತ ಸರ್ಕಾರವು ಉತ್ತರಿಸಿತ್ತು.
ಮಾಲ್ದೀವ್ಸ್ ಗೆ ಭಾರತವು ನೀಡುತ್ತಿರುವ ನೆರವು ಮಾನವ ಸಂಪನ್ಮೂಲಕ್ಕೂ ವಿಸ್ತರಿಸಿದೆ. ವೈದ್ಯರು ಹಾಗೂ ತಜ್ಞ ವೈದ್ಯರ ನೇಮಕಾತಿಯಲ್ಲಿ ಭಾರತದ ನೆರವು ಮಾಲ್ದೀವ್ಸ್ ಪಾಲಿಗೆ ಮಹತ್ವದ್ದಾಗಿದೆ. ಇದರಿಂದಾಗಿ ಆರೋಗ್ಯ ಸೇವೆ ಸಿಬ್ಬಂದಿಗಳಲ್ಲಿ ಉಂಟಾಗುತ್ತಿರುವ ಕೊರತೆಯನ್ನು ತುಂಬಿಸಿಕೊಳ್ಳಲು ಮಾಲ್ದೀವ್ಸ್ ಈ ನೆರವನ್ನು ಆಧರಿಸಿದೆ. ಇದು ಮಾತ್ರವಲ್ಲದೆ, ಈ ದ್ವೀಪ ಸಮೂಹದಲ್ಲಿ ಆರೋಗ್ಯ ಸೇವೆಯ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸಲು ಭಾರತವು ಮಾಲ್ದೀವ್ಸ್ ವೈದ್ಯಕೀಯ ವೃತ್ತಿಪರರಿಗೆ ದೊಡ್ಡ ಪ್ರಮಾಣದ ತರಬೇತಿ ಅವಕಾಶಗಳನ್ನು ನೀಡುವ ಮೂಲಕ ನೆರವು ಒದಗಿಸುತ್ತಿದೆ.
ಮಾಲ್ದೀವ್ಸ್ ನಾಗರಿಕರೇಕೆ ಭಾರತದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತಾರೆ?
ಬಿಎಂಸಿ ಹೆಲ್ತ್ ಸರ್ವಿಸಸ್ ರಿಸರ್ಚ್ ನಲ್ಲಿ ಪ್ರಕಟವಾಗಿರುವ ಮಾಲ್ದೀವ್ಸ್ ವೈದ್ಯಕೀಯ ಪ್ರವಾಸಿಗಳ ಕುರಿತ ಅಧ್ಯಯನದ ಪ್ರಕಾರ, ಮಾಲ್ದೀವ್ಸ್ ವೈದ್ಯಕೀಯ ಪ್ರವಾಸಿಗಳು ಶ್ರೀಲಂಕಾ ನಂತರ ಪರಿಗಣಿಸುವ ನಂತರದ ದೇಶ ಭಾರತವಾಗಿದೆ. ವಾಸ್ತವವಾಗಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ. 98ರಷ್ಟು ಮಂದಿ ಸಾಮೀಪ್ಯ, ಪರಿಚಯ ಹಾಗೂ ಅಗ್ಗ ಎಂಬ ಮೂರು ಪ್ರಮುಖ ಕಾರಣಕ್ಕೆ ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಆಯ್ಕೆ ಮಾಡಿದ್ದಾರೆ.
ಭಾರತದ ಸುಧಾರಿತ ವೈದ್ಯಕೀಯ ಸೌಲಭ್ಯಗಳು ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳು, ಕ್ಯಾನ್ಸರ್ ಆರೈಕೆ ಹಾಗೂ ಇನ್ನಿತರ ವಿಶೇಷ ಚಿಕಿತ್ಸೆಗಳನ್ನು ಒಳಗೊಂಡಿದ್ದು, ಇವನ್ನು ಮಾಲ್ದೀವ್ಸ್ ನ ಆರೋಗ್ಯ ಸೇವಾ ಮೂಲಸೌಕರ್ಯವು ಭರಿಸಲು ಸಾಧ್ಯವಿಲ್ಲ. ಇದು ಮಾತ್ರವಲ್ಲದೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತವು ವಿಶ್ವದರ್ಜೆಯ ವೈದ್ಯರು ಹಾಗೂ ಆಸ್ಪತ್ರೆಗಳ ಮೂಲಕ ಅಗ್ಗದ ದರದಲ್ಲಿ ಚಿಕಿತ್ಸೆಯನ್ನು ಒದಗಿಸುತ್ತಿದೆ.
ಮಾಲ್ದೀವ್ಸ್ ಸರ್ಕಾರವು ಈ ಅವಲಂಬನೆಯನ್ನು ಗುರುತಿಸಿದ್ದು, ತನ್ನ ದೇಶದ ನಾಗರಿಕರು ವಿದೇಶಗಳಲ್ಲಿ ಚಿಕಿತ್ಸೆ ಪಡೆಯಲು ನಿಧಿ ಒದಗಿಸುವ ಆಸಂಧ ಎಂಬ ಸಾರ್ವಜನಿಕ ಉಲ್ಲೇಖ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಆಸಂಧ ಯೋಜನೆಯಡಿ, ಸಾರ್ವಜನಿಕ ವಲಯದ ವೈದ್ಯರು ತಮ್ಮ ದೇಶದಲ್ಲಿ ಲಭ್ಯವಿಲ್ಲದ ನಿರ್ದಿಷ್ಟ ಚಿಕಿತ್ಸಾ ಕ್ರಮಗಳಿಗಾಗಿ ವಿದೇಶಗಳಿಗೆ ಪ್ರಯಾಣಿಸಲು ರೋಗಿಗಳಿಗೆ ಸೂಚಿಸಬಹುದಾಗಿದೆ. ರೋಗಿಗಳು ಪೂರ್ವ ಮಾನ್ಯತೆ ಪಡೆದಿರುವ ಪಟ್ಟಿಯಿಂದ ತಮಗೆ ಬೇಕಾದ ಆಸ್ಪತ್ರೆಗಳನ್ನು ಭಾರತ ಮತ್ತು ಶ್ರೀಲಂಕಾದಿಂದ ಆಯ್ದುಕೊಳ್ಳಬಹುದಾಗಿದೆ. ಈ ಯೋಜನೆಯು ರೋಗಿಗಳು ಪಡೆದಿರುವ ಚಿಕಿತ್ಸೆಗೆ ನೇರವಾಗಿ ಚಿಕಿತ್ಸೆ ಒದಗಿಸಿದ ಸಂಸ್ಥೆಗೆ ಪಾವತಿಸಲಾಗುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯಕೀಯ ನೆರವು
ಕೋವಿಡ್-19 ಸಂದರ್ಭದಲ್ಲಿ ಭಾರತವು ಮಾಲ್ದೀವ್ಸ್ ಗೆ ರೂ. 250 ದಶಲಕ್ಷ ಡಾಲರ್ ಮೊತ್ತಕ್ಕೆ ಸಮನಾದ ಆರ್ಥಿಕ ನೆರವನ್ನು ನೀಡಿತ್ತು. ಈ ನೆರವನ್ನು ಯಾವುದೇ ದೇಣಿಗೆದಾರ ನೀಡಿರುವ ಅತಿ ದೊಡ್ಡ ಆರ್ಥಿಕ ನೆರವು ಎಂದು ಬಣ್ಣಿಸಲಾಗಿತ್ತು. ಹೀಗೆಂದು ಸ್ವತಃ ಆಗಿನ ಮಾಲ್ದೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಾಹಿದ್ ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆ ಅಧಿವೇಶನದಲ್ಲಿ ಬಣ್ಣಿಸಿದ್ದರು.
ಆರ್ಥಿಕ ನೆರವಿನೊಂದಿಗೆ ಭಾರತವು ಮಾರ್ಚ್ 2020ರಂದು ಮಾಲೆಗೆ ಕೋವಿಡ್-19 ವೈದ್ಯಕೀಯ ಪರಿಹಾರ ತಂಡವನ್ನು ರವಾನಿಸಿತ್ತು. ಈ ತಂಡವು ಶ್ವಾಸಕೋಶ ತಜ್ಞರು, ಅರವಳಿಕೆ ತಜ್ಞರು, ವೈದ್ಯರು ಹಾಗೂ ಪ್ರಯೋಗಾಲಯ ತಂತ್ರಜ್ಞರನ್ನು ಒಳಗೊಂಡಿತ್ತು. ಈ ತಂಡವು ಭಾರತವು ಮಾಲ್ದೀವ್ಸ್ ಸರ್ಕಾರಕ್ಕೆ ಒದಗಿಸಿದ್ದ ತುರ್ತು ನೆರವಾಗಿತ್ತು.
ಇದು ಮಾತ್ರವಲ್ಲದೆ, ಭಾರತವು ಅಗತ್ಯ ಔಷಧಿಗಳನ್ನೂ ಮಾಲ್ದೀವ್ಸ್ ಗೆ ಕೊಡುಗೆ ನೀಡಿತ್ತು. ಎಪ್ರಿಲ್ ತಿಂಗಳಲ್ಲಿ 5.5 ಟನ್ ಗಾತ್ರದ ಅಗತ್ಯ ಔಷಧಿಗಳು ಹಾಗೂ ಎರಡನೆ ಬಾರಿ 6.2 ಟನ್ ಗಾತ್ರದ ಅಗತ್ಯ ಔಷಧಿಗಳನ್ನು ಭಾರತೀಯ ವಾಯುಪಡೆಯ ಮೂಲಕ ರವಾನಿಸಲಾಗಿತ್ತು. ಮೇ ತಿಂಗಳಲ್ಲಿ ಭಾರತವು 580 ಟನ್ ನಷ್ಟು ಆಹಾರ ನೆರವನ್ನೂ ಮಾಲ್ದೀವ್ಸ್ ಗೆ ಒದಗಿಸಿತ್ತು.
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ʼನೆರೆಹೊರೆಯವರು ಮೊದಲು’ ಎಂಬ ನೀತಿಯನ್ವಯ ಮಾಲ್ದೀವ್ಸ್ ಪ್ರಪ್ರಥಮ ಬಾರಿಗೆ ಜನವರಿ 2021ರಲ್ಲಿ ಭಾರತ ನಿರ್ಮಿತ ಒಂದು ಲಕ್ಷ ಕೊರೊನೊ ವೈರಸ್ ಲಸಿಕೆಯನ್ನು ಪಡೆದಿತ್ತು.
ಆದರೆ, ಈ ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವು ಹದಗೆಡುತ್ತಿರುವುದರಿಂದ ಮಾಲ್ದೀವ್ಸ್ ನಾಗರಿಕರು ಭಾರತವನ್ನು ಪ್ರಚೋದಿಸುವ ಮೂಲಕ ತಮ್ಮ ದೇಶದ ಸರ್ಕಾರ ಮತ್ತು ಸಚಿವರನ್ನು ‘ತಮ್ಮ ಸುರಕ್ಷತೆಗೆ ಧಕ್ಕೆ ತರುತ್ತಿರುವುದರ’ ಕುರಿತು ಪ್ರಶ್ನಿಸುತ್ತಿದ್ದಾರೆ. ಮಾಲ್ದೀವ್ಸ್ ನಾಗರಿಕರ ಗಾಬರಿಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ.
“ನಾವು ಮಾಲ್ದೀವ್ಸ್ ನಾಗರಿಕರು ಆಹಾರ, ವೈದ್ಯಕೀಯ ತಜ್ಞರು ಹಾಗೂ ಶಸ್ತ್ರಚಿಕಿತ್ಸೆಗಳಿಗಾಗಿ ಭಾರತವನ್ನೇ ಅವಲಂಬಿಸಿದ್ದೇವೆ. ರಾಜತಾಂತ್ರಿಕ ಬಿಕ್ಕಟ್ಟು ಹಲವಾರು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿರುವ ಮಾಲ್ದೀವ್ಸ್ ನಾಗರಿಕರನ್ನು ದಿಗಿಲುಗೊಳಿಸಿದೆ. ನಮ್ಮ ಆರೋಗ್ಯವನ್ನು ತೊಂದರೆಗೆ ಸಿಲುಕಿಸಿರುವ ಈ ಸಚಿವರು ಹಾಗೂ ರಾಜಕೀಯ ನಾಯಕರನ್ನು ಇದಕ್ಕಾಗಿ ಹೊಣೆಯಾಗಿಸಬೇಕಿದೆ” ಎಂದು ಓರ್ವ ಬಳಕೆದಾರರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸೌಜನ್ಯ: indiatoday.in