ಕಥೆಯೊಂದು ಮುಗಿದು ಹೋಗಿದೆ | ಪರದೆಯ ಹಿಂದೆ ಸರಿದ ಕನ್ನಡದ 'ಡೈರೆಕ್ಟರ್ ಸ್ಪೆಷಲ್' ಗುರುಪ್ರಸಾದ್
PC : ಗುರುಪ್ರಸಾದ್
ಚಿತ್ರಪ್ರಿಯರನ್ನು ಎಲ್ಲೂ ನಿರಾಸೆಗೊಳಿಸದೆ ನವಿರಾದ ಹಾಸ್ಯದ ಎಳೆಯಿಟ್ಟುಕೊಂಡು ಕಥೆ ಹೇಳಿ ಮುಗಿಸಿಬಲ್ಲವರಾಗಿದ್ದ ನಿರ್ದೇಶಕ ಗುರುಪ್ರಸಾದ್ ತೀರಿಕೊಂಡಿದ್ದಾರೆ.
ನಾನು ನಿರ್ದೇಶಕನಲ್ಲ, ಹತಾಶ ಪ್ರೇಕ್ಷಕ ಎಂದು ಹೇಳಿಕೊಳ್ಳುತ್ತಲೇ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಗುರುಪ್ರಸಾದ್ ಎಂಟ್ರಿ ಕೊಟ್ಟಿದ್ದರು. ನವೆಂಬರ್ 2 ಅವರು ಹುಟ್ಟಿದ ದಿನ. ಆದರೆ ಆ ದಿನವನ್ನು ಕಾಣುವ ಮೊದಲೇ ಅವರು ಇನ್ನಿಲ್ಲವಾಗಿದ್ದಾರೆ.
ಅವರು ಸಾವಿಗೀಡಾಗಿರುವ ಸುದ್ದಿ ಬಹಿರಂಗವಾಗಿರುವುದು ಕೂಡ ಅವರ ಹುಟ್ಟಿದ ದಿನದ ಮಾರನೇ ದಿನ. ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎನ್ನಲಾಗುತ್ತಿದ್ದು, ಏಕಾಂಗಿಯಾಗಿ ಬದುಕು ಮುಗಿಸಿಕೊಂಡ ಅವರ ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ.
ಮೂರು ಕೋಟಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಸೊರಿಯಾಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಇತ್ತೀಚಿನ ರಂಗನಾಯಕ ಸಿನಿಮಾ ಫ್ಲಾಪ್ ಆಗಿತ್ತು. ಅವರ ನಿರ್ದೇಶನದ ಎದ್ದೇಳು ಮಂಜುನಾಥ-2 ಎರಡು ವರ್ಷಗಳಾದರೂ ಬಿಡುಗಡೆಯಾಗಿರಲಿಲ್ಲ. ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಧನವಾಗುವ ಭಯವಿತ್ತು. ವೈವಾಹಿಕ ಬದುಕು ಅಯೋಮಯವಾಗಿತ್ತು - ಹೀಗೆ ಹಲವು ಮಾತುಗಳು ಕೇಳಿಬರುತ್ತಿವೆ.
ಸದಾ ನಗುನಗುತ್ತಿದ್ದ, ಅರಳು ಹುರಿದಂತೆ ಮಾತಾಡಬಲ್ಲವರಾಗಿದ್ದ, ಮಾತಿನಿಂದಲೇ ಮೋಡಿ ಮಾಡುವ ತಾಕತ್ತೂ ಇದ್ದ ಅವರ ಬದುಕಿನಲ್ಲಿ ಇಷ್ಟೆಲ್ಲ ತಾಪತ್ರಯಗಳಿದ್ದವು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿದ್ದರೂ, ಅವರನ್ನು ಒಬ್ಬ ಚಿತ್ರ ನಿರ್ದೇಶಕರೆಂದು ತಿಳಿದಿದ್ದವರಿಗೆ ಅವರ ಆತ್ಮಹತ್ಯೆ ಸುದ್ದಿ ದಿಗ್ಭ್ರಮೆ ಮೂಡಿಸುತ್ತಿದೆ.
ಮಠ ಮತ್ತು ಎದ್ದೇಳು ಮಂಜುನಾಥ ಸಿನಿಮಾಗಳನ್ನು ನೋಡಿದ್ದವರಿಗೆ, ಉದ್ದಕ್ಕೂ ನಗಿಸುತ್ತ, ಅಮೂಲ್ಯ ಸಂದೇಶದೊಂದಿಗೆ ಮನಸ್ಸಿನಲ್ಲಿ ಉಳಿದುಬಿಡುವ ಆ ಸಿನಿಮಾಗಳ ನಿರ್ದೇಶಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
ಇದುವರೆಗೂ 5 ಕನ್ನಡ ಚಿತ್ರಗಳನ್ನು ಗುರುಪ್ರಸಾದ್ ನಿರ್ದೇಶಿಸಿದ್ದರು. ಅದರಲ್ಲೂ ಅವರ ನಿರ್ದೇಶನದ ಮಠ ಸಿನಿಮಾ ಸ್ಯಾಂಡಲ್ವುಡ್ನ ವಿಶಿಷ್ಟ ಸಿನಿಮಾಗಳಲ್ಲಿ ಒಂದಾಗಿತ್ತು. ತಮ್ಮ ನಿರ್ದೇಶನದ ಮೊದಲ ಹೆಜ್ಜೆಯಲ್ಲೇ ಅವರು ಗೆದ್ದುಬಿಟ್ಟಿದ್ದರು.
ಅವರ ಎದ್ದೇಳು ಮಂಜುನಾಥ ಸಿನಿಮಾ ಅಂತೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಗುರುಪ್ರಸಾದ್ ಬರವಣಿಗೆ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯವಿತ್ತು. ಗುರುಪ್ರಸಾದ್ ಬರೆಯುತ್ತಾರೆ ಎಂದರೆ ಅಲ್ಲೊಂದು ನಿರೀಕ್ಷೆ ಮೂಡುತ್ತಿತ್ತು. ಅವರು ಕೆಲಸ ಮಾಡಿದ್ದ ರಿಯಾಲಿಟಿ ಶೋಗಳೂ ಹಿಟ್ ಆಗಿದ್ದವು. ಆದರೆ ಇದಾವುದೂ ಅವರ ವೈಯಕ್ತಿಕ ಬದುಕಿನಲ್ಲಿ ಅವರ ಕೈಹಿಡಿಯದೇ ಹೋದವೆ, ಅವರನ್ನು ಗೆಲ್ಲಿಸದೆ ಹೋದವೇ? ಬದುಕಿನ ವ್ಯಂಗ್ಯವೇ ಇದು?
2006ರಲ್ಲಿ ತೆರೆಕಂಡ ಮಠ ಸಿನಿಮಾ ಮತ್ತು ಅನಂತರದ ಎದ್ದೇಳು ಮಂಜುನಾಥ ಸಿನಿಮಾ ಇವೆರಡೂ ಗುರುಪ್ರಸಾದ್ಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟವು. ಎದ್ದೇಳು ಮಂಜುನಾಥ ಸಿನಿಮಾದ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನು ಕೂಡ ಗುರುಪ್ರಸಾದ್ ಪಡೆದುಕೊಂಡಿದ್ದರು.
ಇವೆರಡೂ ಸಿನಿಮಾಗಳಲ್ಲಿ ಹೀರೋ ಆಗಿ ಜಗ್ಗೇಶ್ ನಟಿಸಿದ್ದರು. ಮಠ ಜಗ್ಗೇಶ್ ಅವರ 100ನೇ ಸಿನಿಮಾ ಆಗಿತ್ತು. 1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ನಿಜವಾದ ಹೆಸರು ಗುರುಪ್ರಸಾದ್ ರಾಮಚಂದ್ರ ಶರ್ಮಾ, ಈಗ ತಮ್ಮ 52ನೇ ವಯಸ್ಸಿನಲ್ಲಿ ದುರಂತಮಯ ರೀತಿಯಲ್ಲಿ ಹೊರಟು ಹೋಗಿದ್ದಾರೆ.
'ಡೈರೆಕ್ಟರ್ ಸ್ಪೆಷಲ್’, ಎರಡನೇ ಸಲ ಚಿತ್ರಗಳನ್ನೂ ನಿರ್ದೇಶಿಸಿದ್ದರು. ಅವರ ಹೊಸ ಸಿನಿಮಾ ರಂಗನಾಯಕ ಈಚೆಗಷ್ಟೇ ಬಿಡುಗಡೆಯಾಗಿತ್ತಾದರೂ ಥಿಯೇಟರುಗಳಲ್ಲಿ ಸೋತಿತ್ತು. ಎದ್ದೇಳು ಮಂಜುನಾಥ-2 ಬಿಡುಗಡೆಯಾಗದೇ ಉಳಿದಿತ್ತು. ಇದೆಲ್ಲವೂ ಅವರ ಖಿನ್ನತೆಯನ್ನು ಹೆಚ್ಚಿಸಿದ್ದವು ಎನ್ನಲಾಗುತ್ತಿದೆ.
ನಿರ್ದೇಶಕನಾಗಿ ಮಾತ್ರವಲ್ಲದೆ, ಮಠ, ಎದ್ದೇಳು ಮಂಜುನಾಥ, ಮೈಲಾರಿ, ಹುಡುಗರು, ಅನಂತು v/s ನುಸ್ರತ್ ಮುಂತಾದ ಚಿತ್ರಗಳಲ್ಲಿನ ನಟನೆಯಿಂದಲೂ ಗಮನ ಸೆಳೆದಿದ್ದರು.
ಡಾಲಿ ಧನಂಜಯ್ ಅವರ ಬಡವ ರಾಸ್ಕಲ್ ಸಿನಿಮಾದಲ್ಲಿ ಕಡೇ ಸೀನಿನಲ್ಲಿ ಗುರುಪ್ರಸಾದ್ ಅವರದು ಪುರೋಹಿತನ ಪಾತ್ರ. ಇಬ್ಬರು ಬಲವಂತವಾಗಿ ಎತ್ತಿಕೊಂಡೇ ಬರುತ್ತಾರೆ. ಮಂತ್ರ ಶುರು ಮಾಡಿದಾಗ, ಸೀದಾ ತಾಳಿ ಕಟ್ಟಿಸುವ ಹಂತಕ್ಕೆ ಬರಲು ಹೇಳಲಾಗುತ್ತದೆ. ವಧುವಿಗೆ ಅರುಂಧತಿ ನಕ್ಷತ್ರ ತೋರಿಸುವ ಶಾಸ್ತ್ರವನ್ನೂ ಮುಗಿಸಿ, ಅರುಂಧತಿ ನಕ್ಷತ್ರ ಕಂಡಿತಾ ಎಂದು ಕೇಳಿದ್ದಕ್ಕೆ ಆಕೆ ಹೂಂ ಎಂದಾಗ, ಸುಳ್ಳು ಹೇಳುವುದಕ್ಕೆ ಕಲಿತುಬಿಟ್ಟೆ, ಬದುಕು ಚೆನ್ನಾಗಿರುತ್ತದೆ ಎನ್ನುವ, ನಿಮಿಷದಲ್ಲೇ ಮುಗಿವ ಆ ದೃಶ್ಯದಲ್ಲೂ ಮಿಂಚಿಬಿಡುವ ಗುರುಪ್ರಸಾದ್ ನಗುವನ್ನು ಉಳಿಸಿದ್ದರು.
ಹಾಗೆ ನಗುವನ್ನು ಎಲ್ಲರ ಮನಸ್ಸಲ್ಲೂ ಉಳಿಸಬಲ್ಲವರಾಗಿದ್ದ ಗುರುಪ್ರಸಾದ್, ಈಗ ನಗು ಮರೆಸುವಂತೆ ನಿರ್ಗಮಿಸಿದ್ದಾರೆ.
ಗುರುಪ್ರಸಾದ್ ಬಹಳ ಒಳ್ಳೆಯ ನಿರ್ದೇಶಕ, ಪ್ರತಿಭಾಶಾಲಿ. ಅವರ ಬರವಣಿಗೆ ಶೈಲಿ ಬಹಳ ಭಿನ್ನವಾಗಿತ್ತು. ಅವರು ಮನಸ್ಸು ಮಾಡಿದ್ದರೆ ಏನೋ ಸಾಧಿಸಬಹುದಾಗಿತ್ತು. ಆದರೆ ಎರಡು ವಿಷಯಗಳು ಅವರ ಬೆಳವಣಿಗೆಯನ್ನು ತಡೆದವು. ಒಂದು ಮದ್ಯ ಮತ್ತು ಇನ್ನೊಂದು ಅಹಂ. ಅವೆರಡು ಇಲ್ಲದೇ ಹೋಗಿದ್ದರೆ ಗುರುಪ್ರಸಾದ್ ಕನ್ನಡದ ನಂಬರ್ ವನ್ ನಿರ್ದೇಶಕ ಆಗಿರುತ್ತಿದ್ದರು ಎಂದಿದ್ದಾರೆ ಜಗ್ಗೇಶ್.
ಗುರುಪ್ರಸಾದ್ ಸಾವಿಗೆ ನಿಜವಾದ ಕಾರಣವೇನು ಎಂಬುದು ಇಂದಲ್ಲ ನಾಳೆ ಬಯಲಾಗಬಹುದು ಮತ್ತು ಸತ್ಯ ಗೊತ್ತಾಗಬಹುದು. ಆದರೆ ಕಥೆಯೊಂದು ಮುಗಿದುಹೋಗಿದೆ.
ಕನ್ನಡ ಸಿನಿಮಾವನ್ನು ನಾಲ್ಕು ಹೊಡೆದಾಟಗಳು, ಆರು ಹಾಡುಗಳು, ಒಂದು ಸೂತ್ರಬದ್ಧ ಕ್ಲೈಮ್ಯಾಕ್ಸ್ ಇಂಥ ಚೌಕಟ್ಟಿನಿಂದ ಹೊರತಂದಿದ್ದ ನಿರ್ದೇಶಕನೊಬ್ಬನ ಬದುಕಿಗೆ ಇನ್ನಾವ ತಿರುವುಗಳೂ ಇರುವುದಿಲ್ಲ ಎಂಬುದು ಎಂದೆಂದೂ ಉಳಿಯಲಿರುವ ವಿಷಾದ.