ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮತದಾನದ ದತ್ತಾಂಶಗಳಲ್ಲಿ ವ್ಯತ್ಯಾಸ: ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಪತ್ರ ಬರೆದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | PC: ANI
ಹೊಸದಿಲ್ಲಿ: ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಮತದಾನದ ದತ್ತಾಂಶಗಳಲ್ಲಿನ ವ್ಯತ್ಯಯದ ಬಗ್ಗೆ ಮಂಗಳವಾರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಶರದ್ ಪವಾರ್ ಅವರನ್ನುದ್ದೇಶಿಸಿ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಚುನಾವಣೆಯ ಮೊದಲ ಮತ್ತು ಎರಡನೆ ಹಂತದ ಮತದಾನದ ಅಂತಿಮ ಶೇಕಡಾವಾರು ಪ್ರಮಾಣವನ್ನು ಬಿಡುಗಡೆ ಮಾಡುವಲ್ಲಿ ತೋರಿರುವ ವಿಳಂಬದ ಕುರಿತು ಪ್ರಶ್ನೆಯೆತ್ತಿದ್ದು, ಇಂತಹ ನಿದರ್ಶನಗಳು ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ದತ್ತಾಂಶದ ಗುಣಮಟ್ಟದ ಕುರಿತು ಸಂಶಯ ಹುಟ್ಟಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಎಪ್ರಿಲ್ 30ರಂದು 2024ರ ಲೋಕಸಭಾ ಚುನಾವಣೆಯ ಮೊದಲೆರಡು ಹಂತದ ಮತದಾನ ಶೇಕಡಾವಾರು ಪ್ರಮಾಣವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿತ್ತು. ಈ ದತ್ತಾಂಶವನ್ನು ಮೊದಲ ಹಂತದ ಮತದಾನ ನಡೆದ 11 ದಿನಗಳ ನಂತರ (ಎಪ್ರಿಲ್ 19, 2024) ಹಾಗೂ ಎರಡನೆ ಹಂತದ ಮತದಾನ ನಡೆದ ನಾಲ್ಕು ದಿನಗಳ ನಂತರ (ಎಪ್ರಿಲ್ 26, 2024) ಬಿಡುಗಡೆ ಮಾಡಲಾಯಿತು. ಈ ವಿಚಾರದಲ್ಲಿ ಚುನಾವಣಾ ಆಯೋಗಕ್ಕೆ ನಮ್ಮ ಮೊದಲ ಪ್ರಶ್ನೆ – ಮತದಾನದ ಶೇಕಡಾವಾರು ಪ್ರಮಾಣವನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗವೇಕೆ ವಿಳಂಬ ಮಾಡಿತು?” ಎಂದು ಅವರು ಪ್ರಶ್ನಿಸಿದ್ದಾರೆ.
ವಿಳಂಬವನ್ನು ಸಮರ್ಥಿಸಲು ಯಾವುದೇ ಸ್ಪಷ್ಟೀಕರಣ ನೀಡಲು ಚುನಾವಣಾ ಆಯೋಗವೇಕೆ ವಿಫಲವಾಯಿತು ಎಂದೂ ಅವರು ಪ್ರಶ್ನಿಸಿದ್ದಾರೆ.
ಮತದಾನದ ಶೇಕಡಾವಾರು ಪ್ರಮಾಣದ ದತ್ತಾಂಶದಲ್ಲಿನ ವ್ಯತ್ಯಯದತ್ತ ಬೊಟ್ಟು ಮಾಡಿರುವ ಮಲ್ಲಿಕಾರ್ಜುನ ಖರ್ಗೆ, “ಮೊದಲ ಹಂತದ (102 ಸ್ಥಾನಗಳು) ಮತದಾನದಲ್ಲಿ ಅಂದಾಜು ಶೇ. 60ರಷ್ಟು ಮತದಾನವಾಗಿದೆ ಎಂದು ಎಪ್ರಿಲ್ 19, 2024ರ ಸಂಜೆ 7 ಗಂಟೆಗೆ ಚುನಾವಣಾ ಆಯೋಗ ಹೇಳಿದರೆ, ಎರಡನೆ ಹಂತದ (88 ಸ್ಥಾನಗಳು) ಮತದಾನದಲ್ಲಿ ಅಂದಾಜು ಶೇ. 60.96ರಷ್ಟು ಮತದಾನವಾಗಿದೆ ಎಂದು ಹೇಳಿತ್ತು. (ಈ ಅಂಕಿ-ಸಂಖ್ಯೆಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು). ಆದರೆ, ಎಪ್ರಿಲ್ 20, 2024ರಂದು ಚುನಾವಣಾ ಆಯೋಗವೇಕೆ ಮೊದಲ ಹಂತದ ಮತದಾನದ ಪ್ರಮಾಣವನ್ನು ಶೇ. 65.5ಕ್ಕೆ ಏರಿಕೆ ಮಾಡಿತು ಹಾಗೂ ಎಪ್ರಿಲ್ 27, 2024ರಂದು ಎರಡನೆ ಹಂತದ ಮತದಾನದ ಪ್ರಮಾಣದ ದತ್ತಾಂಶವನ್ನು ಶೇ. 66.7 ಎಂದು ತೋರಿಸಿತು? ಅಂತಿಮವಾಗಿ ಎಪ್ರಿಲ್ 30, 2024ರಂದು ಮೊದಲ ಹಂತದ ಮತದಾನ ಪ್ರಮಾಣವನ್ನು ಶೇ. 66.14 ಹಾಗೂ ಎರಡನೆ ಹಂತದ ಮತದಾನದ ಪ್ರಮಾಣವನ್ನು ಶೇ. 66.71 ಎಂದು ದೃಢಪಡಿಸಲಾಯಿತು?” ಎಂದೂ ಅವರು ಪ್ರಶ್ನಿಸಿದ್ದಾರೆ.
ಮೊದಲ ಹಂತದ ಮತದಾನ ಮುಕ್ತಾಯವಾದ ನಂತರ ಬಿಡುಗಡೆ ಮಾಡಲಾದ ದತ್ತಾಂಶಕ್ಕೆ ಹೋಲಿಸಿದರೆ ವಿಳಂಬವಾಗಿ ಬಿಡುಗಡೆ ಮಾಡಲಾದ ಮತದಾನ ಪ್ರಮಾಣದ ದತ್ತಾಂಶದಲ್ಲಿ ಶೇ. 5.5ರಷ್ಟು ಏರಿಕೆಯಾಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದ ಸಂರಕ್ಷಣೆ ಹಾಗೂ ಚುನಾವಣಾ ಆಯೋಗದ ಸ್ವತಂತ್ರ ಕಾರ್ಯನಿರ್ವಹಣೆಯನ್ನು ರಕ್ಷಿಸಬೇಕಾದ ಮಹತ್ವವನ್ನು ಒತ್ತಿ ಹೇಳಿರುವ ಅವರು, ಇಂಡಿಯಾ ಮೈತ್ರಿಕೂಟದ ನಾಯಕರು ಸಾಮೂಹಿಕವಾಗಿ, ಒಗ್ಗಟ್ಟಾಗಿ ಮತ್ತು ರಾಜಿರಹಿತವಾಗಿ ಮತದಾನ ಪ್ರಮಾಣದ ದತ್ತಾಂಶದಲ್ಲಿನ ವ್ಯತ್ಯಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.