ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ನೆಲಸಮ ಕಾರ್ಯಾಚರಣೆಗಳನ್ನು ಬಳಸಿಕೊಳ್ಳುವ ತಾರತಮ್ಯದ ನೀತಿ ನಿಲ್ಲಬೇಕು: ಆಮ್ನೆಸ್ಟಿ
Photo: PTI
ಹೊಸದಿಲ್ಲಿ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಮೀರಾ-ಭಾಯಂದರ್ ನಗರಸಭೆಯು ನಡೆಸಿದ ಬುಲ್ಡೋಜರ್ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ, ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ನೆಲಸಮ ಕಾರ್ಯಾಚರಣೆಗಳನ್ನು ಬಳಸಿಕೊಳ್ಳುವ ತಮ್ಮ ತಾರತಮ್ಯದ ನೀತಿಯನ್ನು ಭಾರತೀಯ ಅಧಿಕಾರಿಗಳು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
ಮಂಗಳವಾರ ಮೀರಾ-ಭಾಯಂದರ್ ನಗರಸಭೆಯು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಮುನ್ನಾದಿನವಾದ ರವಿವಾರ ರಾತ್ರಿ ಕೋಮು ಹಿಂಸಾಚಾರ ಸಂಭವಿಸಿದ್ದ ಮೀರಾ ರೋಡ್ನ ನಯಾನಗರ ಪ್ರದೇಶದಲ್ಲಿ ‘ಅಕ್ರಮ’ ಕಟ್ಟಡಗಳನ್ನು ನೆಲಸಮಗೊಳಿಸಲು ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಿತ್ತು.
ಈ ಕಟ್ಟಡಗಳು ಮುಸ್ಲಿಮರಿಗೆ ಸೇರಿದ್ದವು, ಅದರೆ ಬಂಧಿಸಲ್ಪಟ್ಟಿರುವ 13 ಜನರಿಗೆ ಸಂಬಂಧಿಸಿರಲಿಲ್ಲ ಎಂದು ಪ್ರದೇಶದ ನಿವಾಸಿಯಾಗಿರುವ ಸಾಮಾಜಿಕ ಕಾರ್ಯಕರ್ತರೋರ್ವರು scroll.in ಗೆ ತಿಳಿಸಿದರು.
ಕಟ್ಟಡಗಳು ಕಾಲುವೆಗಳು ಮತ್ತು ಫುಟ್ಪಾತ್ಗಳ ಮೇಲಿದ್ದರಿಂದ ಅವುಗಳನ್ನು ನೆಲಸಮಗೊಳಿಸಲಾಗಿದೆ ಎಂದು ನಗರಸಭೆಯ ಉಪ ಆಯುಕ್ತ ಮಾರುತಿ ಗಾಯಕ್ವಾಡ್ ಸಮಜಾಯಿಷಿ ನೀಡಿದ್ದಾರೆ.
ಕೋಮು ಹಿಂಸಾಚಾರದ ಘಟನೆಗಳ ಬಳಿಕ ಮುಸ್ಲಿಮರ ಆಸ್ತಿಗಳನ್ನು ನಿರಂಕುಶವಾಗಿ ಮತ್ತು ದಂಡನೆ ಕ್ರಮವಾಗಿ ನೆಲಸಮಗೊಳಿಸುವ ತಮ್ಮ ತಾರತಮ್ಯದ ನೀತಿಯನ್ನು ಅಧಿಕಾರಿಗಳು ನಿರ್ಭೀತಿಯಿಂದ ಜಾರಿಗೊಳಿಸುತ್ತಿರುವುದು ಆತಂಕಕಾರಿಯಾಗಿದೆ. ಯಾವುದೇ ನೋಟಿಸ್ ನೀಡದೆ ಅಥವಾ ಇತರ ಯಾವುದೇ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಳ್ಳದೆ ಹಿಂಸಾಚಾರದ ಶಂಕಿತ ವ್ಯಕ್ತಿಗಳ ವಿರುದ್ಧ ಇಂತಹ ಕಾನೂನುಬಾಹಿರ ಕ್ರಮವು ಕಾನೂನಿನ ಆಡಳಿತಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಹೇಳಿರುವ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಅಧ್ಯಕ್ಷ ಆಕರ್ ಪಟೇಲ್ ಅವರು, ಬಲವಂತದ ತೆರವು ಕ್ರಮಗಳ ವಿರುದ್ಧ ರಕ್ಷಣೆ ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಭಾರತವೂ ಸಹಿ ಹಾಕಿರುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತ ಅಂತರರಾಷ್ಟ್ರೀಯ ಒಪ್ಪಂದವು ಬಲವಂತದ ತೆರವು ಕಾರ್ಯಾಚರಣೆಗಳನ್ನು ನಿಷೇಧಿಸಿದೆ. ತೆರವು ಕಾರ್ಯಾಚರಣೆಯಿಂದ ಪೀಡಿತರಾಗಿರುವ ಎಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ಸಾಕಷ್ಟು ಪರಿಹಾರವನ್ನು ಪಾವತಿಸಬೇಕು, ಘಟನೆಗೆ ಹೊಣೆಗಾರರಾದವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೇಲ್ನೋಟಕ್ಕೆ ಅಕ್ರಮವೆಂದು ಕಂಡು ಬರುವ ಆರೋಪಿಗಳ ಆಸ್ತಿಗಳನ್ನು ನೆಲಸಮಗೊಳಿಸುವ ಪ್ರವೃತ್ತಿ ಅಧಿಕಾರಿಗಳಲ್ಲಿ ಹೆಚ್ಚುತ್ತಿದೆ. ದಂಡನಾತ್ಮಕ ಕ್ರಮವಾಗಿ ಆಸ್ತಿಗಳನ್ನು ನೆಲಸಮಗೊಳಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ.
ಬುಧವಾರ ಬೃಹನ್ಮುಂಬೈ ಮಹಾನಗರ ಪಾಲಿಕೆಯು ಮುಹಮ್ಮದ್ ಅಲಿ ರಸ್ತೆಯಲ್ಲಿಯ ಸುಮಾರು 40 ರಚನೆಗಳ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆಯನ್ನು ನಡೆಸಿದೆ.