ರಾಹುಲ್ ಗಾಂಧಿ ಅನರ್ಹತೆ: ಕಾಂಗ್ರೆಸ್ ನಿಂದ ದೇಶ ವ್ಯಾಪಿ ‘‘ಮೌನ ಸತ್ಯಾಗ್ರಹ’’
ಸಿದ್ದರಾಮಯ್ಯ , ಡಿ.ಕೆ. ಶಿವಕುಮಾರ್ | Photo: PTI
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದರ ಪ್ರತಿಭಟನಾರ್ಥವಾಗಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ದೇಶಾದ್ಯಂತ ಪ್ರತಿ ರಾಜ್ಯದ ರಾಜಧಾನಿಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಬುಧವಾರ ‘‘ಮೌನ ಸತ್ಯಾಗ್ರಹ’’ ನಡೆಸಿದರು.
ಮೋದಿ ಉಪ ನಾಮ ಕುರಿತ 2019ರ ಮಾನಹಾನಿ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಶಿಕ್ಷೆ ವಿಧಿಸಿ ನೀಡಿದ ತೀರ್ಪಿಗೆ ತಡೆ ನೀಡಲು ಗುಜರಾತ್ ಉಚ್ಚ ನ್ಯಾಯಾಲಯ ನಿರಾಕರಿಸಿದ ಬಳಿಕ ರಾಹುಲ್ ಗಾಂಧಿ ಅವರು ಲೋಕಸಭೆಯಿಂದ ಅನರ್ಹಗೊಂಡಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪ್ರತಿಭಟನೆ ಘೋಷಿಸಿದ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರ ಸರಕಾರದ ಪ್ರಬಲ ವಿರೋಧಿಯಾಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತರ ಶಾಸಕರೊಂದಿಗೆ ಅಭಿವ್ಯಕ್ತಿ ಸ್ವಾತಂತ್ರ ಅಪಾಯದಲ್ಲಿದೆ ಎಂಬುದನ್ನು ಸಾಂಕೇತಿಕವಾಗಿ ತಿಳಿಸಲು ತಮ್ಮ ಬಾಯಿಗೆ ಕಪ್ಪು ರಿಬ್ಬನ್ ಕಟ್ಟಿಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ‘‘ಮೌನ ಸತ್ಯಾಗ್ರಹ’’ ನಡೆಸಿದರು. ಇದೇ ರೀತಿಯ ಪ್ರತಿಭಟನೆ ಉತ್ತರಪ್ರದೇಶದ ಲಕ್ನೋದಲ್ಲಿ ಕೂಡ ನಡೆಯಿತು. ಅಧಿಕಾರದ ಶಕ್ತಿಯಿಂದ ಮೋದಿ ಸರಕಾರ ರಾಹುಲ್ ಗಾಂಧಿ ಅವರ ಧ್ವನಿಯನ್ನು ದಮನಿಸಲು ನಿರಂತರ ಪ್ರಯತ್ನಿಸುತ್ತಿದೆ.
ಇದು ಪ್ರಜಾಪ್ರಭುತ್ವದ ಮೇಲೆ ದಾಳಿ. ಇದನ್ನು ಸಹಿಸಲು ಸಾಧ್ಯವಿಲ್ಲ ಕಾಂಗ್ರೆಸ್ ನ ಹೇಳಿಕೆ ತಿಳಿಸಿದೆ. ಪಶ್ಚಿಮಬಂಗಾಳ ಕಾಂಗ್ರೆಸ್ ವರಿಷ್ಠ ಅಧೀರ್ ರಂಜನ್ ಚೌದರಿ ಅವರು ಪಕ್ಷದ ಸಹೋದ್ಯೋಗಿಗಳೊಂದಿಗೆ ಕೋಲ್ಕತ್ತಾದ ಕೇಂದ್ರ ಭಾಗದಲ್ಲಿರುವ ಮೇಯೋ ರೋಡ್-ಡಫ್ಫೆರಿನ್ ರೋಡ್ ಕ್ರಾಸಿಂಗ್ನಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಮೌನ ಸತ್ಯಾಗ್ರಹ ನಡೆಸಿದರು.
ಶಾಸಕರು, ಸಂಸದರು ಹಾಗೂ ಮಾಜಿ ಸಚಿವರು ಸೇರಿದಂತೆ ಕೇರಳದ ಹಿರಿಯ ನಾಯಕರು ತಿರುವನಂತಪುರದ ಕೇಂದ್ರ ಭಾಗದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ‘‘ಮೌನ ಸತ್ಯಾಗ್ರಹ’’ ನಡೆಸಿದರು. ಅದು ಸಂಜೆವರೆಗೆ ಮುಂದುವರಿಯಿತು. ‘‘ಮೌನ ಸತ್ಯಾಗ್ರಹ’’ ಆರಂಭಿಸುವುದಕ್ಕಿಂತ ಮುನ್ನ ಕೇರಳ ಪಿಸಿಸಿ ವರಿಷ್ಠ ಕೆ. ಸುಧಾಕರನ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಆಡಳಿತರೂಡ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ದೂರ ಇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಶ್ರೀನಗರ, ಒಡಿಶಾ, ಚತ್ತೀಸ್ಗಢ, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಕೂಡ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ‘‘ಮೌನ ಸತ್ಯಾಗ್ರಹ’’ ನಡೆಸಿದರು.