ಡಿಎಂಕೆ ಮುಖಂಡನ ಪುತ್ರ ನಿಗೂಢ ಸಾವು: ಮರಳು ಮಾಫಿಯಾ ಕೈವಾಡ ಶಂಕೆ
ಎಸ್.ಪ್ರಶಾಂತ್ PC: TOI
ವೆಲ್ಲೂರು: ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಮುಖಂಡರೊಬ್ಬರ ಪುತ್ರನ ಮೃತದೇಹ ಪಕ್ಕದ ಹೊಲದಲ್ಲಿ ಪತ್ತೆಯಾಗಿದೆ. ಅವರ ಪಾದವನ್ನು ಕಬ್ಬಿಣದ ತಂತಿಯಿಂದ ಕಟ್ಟಲಾಗಿದ್ದು, ತಲೆಯ ಮೇಲೆ ಗಾಯದ ಗುರುತುಗಳಿವೆ.
ಮೃತ ಯುವಕ ಎಸ್.ಪ್ರಶಾಂತ್ ಹಾಗೂ ಅವರ ತಂದೆ ಕೆ.ಶ್ರೀನಿವಾಸನ್ ಅವರು ತಮ್ಮ ಹೊಲದ ಸಮೀಪ ದೊಡ್ಡ ಪ್ರಮಾಣದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಲಾಗಿದೆ ಎನ್ನುವುದು ಕುಟುಂಬದವರ ಆರೋಪ. ಶ್ರೀನಿವಾಸನ್ ಅವರು ಡಿಎಂಕೆಯ ಪೆರ್ನಂಪೇಟೆ ಘಟಕದಲ್ಲಿ ಪದಾಧಿಕಾರಿಯಾಗಿದ್ದು, ಪಂಡಲತೊಟ್ಟಿ ಮೂಲದ ಇವರು ಸರ್ಕಾರಿ ಗುತ್ತಿಗೆದಾರರೂ ಹೌದು.
ಪ್ರಶಾಂತ್ ನಾಪತ್ತೆಯಾಗಿರುವ ಬಗ್ಗೆ ಕಳೆದ ಶನಿವಾರ ಪೆರ್ನಂಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಮಂಗಳವಾರ ಸಂಜೆ ಅವರ ಮೃತದೇಹ ಪತ್ತೆಯಾಗಿದೆ. ಈ ಶವವನ್ನು ಪೊಲೀಸರು ವಶಪಡಿಸಿಕೊಳ್ಳದಂತೆ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅವರ ಸಂಬಂಧಿಕರು, ಸ್ನೇಹಿತರು ಮತ್ತು ಗ್ರಾಮಸ್ಥರು ತಡೆದಿದ್ದರು. ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹತ್ಯೆ ಬಗ್ಗೆ ತನಿಖೆ ನಡೆಸಲು ಡಿಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರನ್ನು ನೇಮಕ ಮಾಡುವುದಾಗಿ ಡಿಎಸ್ಪಿ ಭಾಸ್ಕರನ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟಿದ್ದರು.
"ನನ್ನ ಕೃಷಿಭೂಮಿಯ ಪಕ್ಕದ ನದಿ ತೀರದಲ್ಲಿ ಮತ್ತು ನದಿ ದಂಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಕಳೆದ ತಿಂಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೆವು" ಎಂದು ಶ್ರೀನಿವಾಸನ್ ಹೇಳಿದ್ದಾರೆ.
"ಮಕ್ಕಲುದನ್ ಮುದಲ್ವೇರ್ ಯೋಜನೆಯಡಿ ಅರ್ಜಿ ಸಲ್ಲಿಸಿದ್ದೆವು. ಎಲ್ಲ ಪಕ್ಷಗಳಿಗೂ ಸೇರಿದ ಗ್ಯಾಂಗ್ ಗಳು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿವೆ. ಇಂಥ ಒಂದು ಗ್ಯಾಂಗ್ ನನ್ನ ಮಗನನ್ನು ಹತ್ಯೆ ಮಾಡಿದೆ ಎನ್ನುವುದು ನನ್ನ ಅಭಿಮತ" ಎಂದು ಆಪಾದಿಸಿದ್ದಾರೆ.